ಚಾಮರಾಜನಗರ: ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತಾರಣ್ಯದ ಹೊರ ವಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಂದು ಕೂಡ ಕಾಡ್ಗಿಚ್ಚು ಮುಂದುವರಿದಿದೆ.
ಬೆಂಕಿಯಿಂದ ನೂರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಕೂಡ ಭಸ್ಮವಾಗಿದ್ದು, ಬಂಡಿಪುರದ ಗೋಪಾಲಸ್ವಾಮಿ ಬೀಟ್‍ನಲ್ಲಿ ಇನ್ನೂ ಬೆಂಕಿ ಆರಿಲ್ಲ. ಕಾಡಿನ ಬೆಟ್ಟಕ್ಕೆ ಬೆಂಕಿ ಬಿದ್ದ ಕಾರಣ ಬೆಂಕಿಯನ್ನು ಆರಿಸಲಾಗದೇ ಧಗ ಧಗ ಉರಿಯುತ್ತಿದೆ. ಹೀಗಾಗಿ ಊಟಿ-ಗುಂಡ್ಲುಪೇಟೆ ಸಂಚಾರ ಕೆಲ ಕಾಲ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಟ ಅನುಭವಿಸುತ್ತಿದ್ದಾರೆ.
ಗೋಪಾಲಸ್ವಾಮಿ ಬೀಟ್‍ನ ಜಾರ್ಕಕಲ್ಲುಕೊರೆ ಬೆಟ್ಟ, ಗುಮ್ಮನ ಗುಡ್ಡ ಮತ್ತು ಗೌರಿಕಲ್ಲು ಬೆಟ್ಟ ಬೆಂಕಿಯಿಂದ ಸಂಪೂರ್ಣ ನಾಶವಾಗಿದೆ. ಕುಂದಕೆರೆ ವಲಯದ ಬರೆಕಟ್ಟೆ ಮತ್ತು ಗುಡ್ಡ ಕೆರೆ ಬೆಟ್ಟಗಳು ಬೆಂಕಿಗೆ ಆಹುತಿಯಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಗ್ನಿಶಾಮದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದು, ಹರಸಾಹಸ ಪಡುತ್ತಿದ್ದಾರೆ.
ತೀವ್ರ ಗತಿಯಲ್ಲಿ ಬೆಂಕಿ ಕಾಡಿಗೆ ಆವರಿಸಿರುವುದರಿಂದ ಬೆಂಕಿ ಹತೋಟಿಗೆ ಬಾರದೆ, ಕ್ಷಣ ಕ್ಷಣಕ್ಕೂ ಕಾಡಿನ ಅಪಾರ ಪ್ರದೇಶವನ್ನು ಆವರಿಸುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv