ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಕಳೆದೆರಡು ತಿಂಗಳ ಹಿಂದೆ ಬೆಂಕಿಯ ಕೆನ್ನಾಲೆಗೆ ಸಿಲುಕಿ ಅಕ್ಷರಶಃ ಸುಟ್ಟು ಕರಕಲಾಗಿತ್ತು. ಇದೀಗ ಆ ಪ್ರದೇಶದಲ್ಲಿ ಒಂದೆರಡು ಮಳೆಯಾಗಿರುವ ಕಾರಣ ಕೊಂಚ ಹಸಿರಿನ ಸಿರಿ ಗೋಚರವಾಗುತ್ತಿದೆ. ಇದಲ್ಲದೆ ಅರಣ್ಯ ಇಲಾಖೆ ವನದ ಸೌಂದರ್ಯವನ್ನು ಹೆಚ್ಚಿಸಲು ಮಾಸ್ಟರ್ ಪ್ಲಾನ್ ಕೂಡ ಮಾಡಿದೆ.
ರಾಜ್ಯದಲ್ಲೇ ಅತೀ ಹೆಚ್ಚು ಹುಲಿಗಳಿರುವ ತಾಣ ಎಂದರೆ ಅದು ಬಂಡೀಪುರ. ಆನೆ, ಚಿರತೆ, ಕರಡಿ ಜಿಂಕೆ ಕಾಡೆಮ್ಮೆ ಸೇರಿದಂತೆ ಅಸಂಖ್ಯಾತ ಪ್ರಾಣಿಪಕ್ಷಿಗಳ ಆವಾಸ ಸ್ಥಾನವೂ ಆಗಿರುವ ಬಂಡೀಪುರ ಅರಣ್ಯ ಪ್ರದೇಶ ಕಿಡಿಗೇಡಿಗಳ ಕೃತ್ಯದಿಂದ ಅಕ್ಷರಶ: ಬೆಂಕಿಪುರವಾಗಿತ್ತು. ಕಳೆದ ಫೆಬ್ರವರಿಯಲ್ಲಿ ಬಿದ್ದ ಬೆಂಕಿಯ ಪರಿಣಾಮ ನಾಲ್ಕೂವರೆ ಸಾವಿರ ಹೆಕ್ಟೇರ್ ಪ್ರದೇಶದ ಅರಣ್ಯ ಸುಟ್ಟು ಕರಕಲಾಗಿತ್ತು. ನೆಲದಲ್ಲಿ ತೆವಳುವ ಹಾಗೂ ಹರಿದಾಡುವ ಸರಸೃಪಗಳು ಹಾಗೂ ಇತರ ಸೂಕ್ಷ್ಮಾಣು ಜೀವಿಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದವು. ನೂರಾರು ಅರಣ್ಯ ಸಿಬ್ಬಂದಿ, ಸ್ವಯಂಸೇವಕರು ಹಾಗೂ ಹೆಲಿಕಾಪ್ಟರ್ ಕಾರ್ಯಚರಣೆ ಮೂಲಕ ಕೊನೆಗೂ ಬೆಂಕಿ ನಂದಿಸಲಾಗಿತ್ತು.
Advertisement
Advertisement
ಬಂಡೀಪುರದಲ್ಲೀಗ ಉತ್ತಮ ಮಳೆಯಾಗಿದ್ದು ಅರಣ್ಯ ಇಲಾಖೆ ಹಾಗು ಪರಿಸರ ಪ್ರಿಯರಲ್ಲಿ ಆಶಾಭಾವನೆ ಮೂಡಿಸಿದೆ. ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ಅರಣ್ಯ ಇಲಾಖೆ ಬಂಡೀಪುರವನ್ನು ಹಂತ ಹಂತವಾಗಿ ಪುನಶ್ಚೇತನಗೊಳಿಸುವ ಮೂಲಕ ಸಹಜ ಸ್ಥಿತಿಗೆ ತರಲು ಮುಂದಾಗಿದೆ. ಇದಕ್ಕಾಗಿ ಬೆಂಕಿ ಬಿದ್ದಿರುವ ಪ್ರದೇಶಗಳಲ್ಲಿ ನಾನಾ ರೀತಿ ಮರಗಿಡಗಳ ಬೀಜಗಳನ್ನು ಬಿತ್ತನೆ ಮಾಡುವ ಕಾರ್ಯ ಆರಂಭಿಸಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದರ್ ತಿಳಿಸಿದ್ದಾರೆ.
Advertisement
Advertisement
ಬೀಜ ಸಂಶೋಧನಾ ಕೇಂದ್ರದಿಂದ ಈಗಾಗಲೇ 8 ಟನ್ ಬೀಜಗಳನ್ನು ಖರೀದಿಸಲಾಗಿದೆ. ಬಂಡೀಪುರ ಪರಿಸರಕ್ಕೆ ಹೊಂದಿಕೊಳ್ಳುವ ಅಂಟುವಾಳ, ಕರಿಮತ್ತಿ, ಶ್ರೀಗಂಧ, ಹುಣಸೆ, ಕರಿಜಾಲಿ, ಹೊಂಗೆ, ಹೆಬ್ಬೇವು, ಬೆಟ್ಟದ ನಲ್ಲಿ ಬೀಜಗಳನ್ನು, ಸುಟ್ಟು ಕರಕಲಾಗಿದ್ದ ಅರಣ್ಯ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿದೆ. ಇದರ ಜೊತೆಗೆ ಹೆಮೆಟಾ ಎಂಬ ಹುಲ್ಲಿನ ಬೀಜವನ್ನು ಬಿತ್ತನೆ ಮಾಡಲಾಗುತ್ತಿದೆ. ಪ್ರಮುಖವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಬೀಜ ಬಿತ್ತನೆ ಮಾಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಇದಕ್ಕಾಗಿ 5 ಟನ್ ಬಿದಿರು ಬೀಜಕ್ಕಾಗಿ ಬೀಜ ಸಂಶೋಧನಾ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೀಗ ಪೂರ್ವ ಮುಂಗಾರು ಮಳೆ ಆರಂಭವಾಗಿದ್ದು ಮೊದಲ ಹಂತದ ಬಿತ್ತನೆ ಕಾರ್ಯ ಮಾಡಲಾಗುತ್ತಿದೆ. ಈ ಭಾಗದಲ್ಲಿ ಹೆಚ್ಚಿನ ಮಳೆ ಬೀಳುವ ಜೂನ್, ಜುಲೈ ಹಾಗು ಸೆಪ್ಟೆಂಬರ್ ತಿಂಗಳಲ್ಲಿ ಬೀಜ ಬಿತ್ತನೆ ಕಾರ್ಯ ಮುಂದುವರಿಸುವ ಉದ್ದೇಶ ಹೊಂದಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮಹದೇವಗೌಡ ಹೇಳಿದ್ದಾರೆ.
ಒಟ್ಟಿನಲ್ಲಿ ಬಂಡೀಪುರ ಪುನಶ್ಚೇತನಗೊಳಿಸಲು ಮುಂದಾಗಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ವರುಣನ ಕೃಪೆ ಅತ್ಯಗತ್ಯವಾಗಿದೆ.