– 7 ಹೆಲಿಕಾಪ್ಟರ್ ಗಳನ್ನು ಕಳುಹಿಸಿದ ವಾಯುಸೇನೆ
– ಅಗ್ನಿಶಾಮಕ ದಳ, ಸಾರ್ವಜನಿಕರಿಂದ ಹರಸಾಹಸ
ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ಬೆಂಕಿ ನಂದಿಸಲು ಏರ್ ಫೋರ್ಸ್ ನೆರವು ಪಡೆದಿದ್ದು, ಹೀಗಾಗಿ ಸೇನಾ ಹೆಲಿಕಾಪ್ಟರ್ ಮೊದಲು ಹಾನಿಗೊಳಗಾದ ಅರಣ್ಯ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದೆ.
ಬಂಡೀಪುರಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ ಮಧುಮಲೈ ಕಡೆಯಿಂದ ಮತ್ತೆ ಬೆಂಕಿ ಹಬ್ಬುವ ಸಾಧ್ಯತೆಗಳಿವೆ. ಹೀಗಾಗಿ ಬೆಂಕಿ ಕರ್ನಾಟಕದ ಭಾಗಕ್ಕೆ ಹಬ್ಬದಂತೆ ಕಾರ್ಯಾಚರಣೆ ನಡೆಯುತ್ತಿದೆ. ಸಿಎಂ ಕೋರಿಕೆಯ ಮೇರೆಗೆ ಇದೀಗ ವಾಯುಪಡೆಯ ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತಿದೆ. ಈ ಮೂಲಕ ಹೆಲಿಕಾಪ್ಟರ್ ನಲ್ಲಿ ನೀರು ತಂದು ಹೊತ್ತಿ ಉರಿಯುತ್ತಿರುವ ಬಂಡೀಪುರವನ್ನು ನಿಯಂತ್ರಣಕ್ಕೆ ತರಲು ಪ್ಲಾನ್ ಮಾಡಲಾಗಿದೆ.
ಇಂದು ಮುಂಜಾನೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಯವರು ಹಿರಿಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸುದೀರ್ಘವಾದ ಸಮಾಲೋಚನೆ ನಡೆಸಿದ್ದಾರೆ. ಸಭೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತಿತರ ಅಧಿಕಾರಿಗಳು ಇದ್ದರು. ಚರ್ಚೆಯ ವೇಳೆ ಏರ್ ಪೋರ್ಸ್ ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸುವ ಕೆಲಸ ಮಾಡಬಹುದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ ಈ ಬಗ್ಗೆ ಏರ್ ಫೋರ್ಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿದ್ದಾರೆ. ಇದನ್ನೂ ಓದಿ: ಸುದ್ದಿ ಹರಡಿ ಕಾಡು ರಕ್ಷಿಸಲು ಇಲಾಖೆಗೆ ಸಹಾಯ ಮಾಡೋಣ- ಯದುವೀರ್ ಒಡೆಯರ್
ರೆಕ್ಕಿ ತಂತ್ರಜ್ಞಾನವನ್ನು ಬಳಸಿ ಹೆಲಿಕಾಪ್ಟರ್ ಗಳನ್ನು ಕಳುಹಿಸಿ ಎಚ್ ಡಿ ಕೋಟೆ ಸಮೀಪವಿರುವ ನುಗು ಜಲಾಶಯದಿಂದ ನೀರನ್ನು ಲಿಫ್ಟ್ ಮಾಡಿ ಬೆಂಕಿ ಹೊತ್ತಿಕೊಂಡಿರುವ ಅರಣ್ಯ ಪ್ರದೇಶಗಳಲ್ಲಿ ನೀರನ್ನು ಸಿಂಪಡಿಸುವ ಕೆಲಸವನ್ನು ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಸದ್ಯ ಹೆಲಿಕಾಪ್ಟರ್ ಗಳು ಪ್ರಾಯೋಗಿಕವಾಗಿ ಹಾರಾಟ ನಡೆಸಿವೆ. ಸ್ಥಳಕ್ಕೆ 7 ಹೆಲಿಕಾಪ್ಟರ್ ಗಳು ಆಗಮಿಸಿವೆ. ಆದರೆ ನೀರನ್ನು ಲಿಫ್ಟ್ ಮಾಡುವ ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ. ಬೆಂಕಿ ನಂದಿಸುವವರೆಗೆ ಅರಣ್ಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ಕಳೆದ 5 ದಿನಗಳಿಂದ ಬಂಡೀಪುರ ಅಭಯಾರಣ್ಯದಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಸ್ವಯಂ ಸೇವಕರು ಈಗಾಗಲೇ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸತತ ಪ್ರಯತ್ನ ನಡುವೆಯೂ ಬೆಂಕಿ ನರ್ತನ ಮುಂದುವರಿದಿದ್ದು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೊಲ, ಕೋತಿ, ಜಿಂಕೆ, ಹಾವು ಸೇರಿದಂತೆ ಇತರೆ ಪ್ರಾಣಿಗಳು ಸಜೀವ ದಹನವಾಗಿವೆ. ಬೆಳಗ್ಗಿನ ಜಾವ ಬೆಂಕಿ ನಿಯಂತ್ರಣಕ್ಕೆ ಬರುತ್ತಿದ್ದು, ಮಧ್ಯಾಹ್ನದ ವೇಳೆ ಭೀಕರತೆಗೆ ತಿರುಗುತ್ತದೆ. ಬೆಳಗ್ಗಿನ ಜಾವ ಮಂಜು ಬೀಳುತ್ತಿರುವ ಕಾರಣ ಬೆಂಕಿ ಹತೋಟಿಗೆ ಬರುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv