ಚಾಮರಾಜನಗರ: ಕರ್ನಾಟಕ ಸರ್ಕಾರ ಬಂಡೀಪುರ ಅರಣ್ಯದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಹೇರಿರುವ ನಿಷೇಧವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ವಯನಾಡ್ ಕ್ಷೇತ್ರದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಸ್ವಯಂಪ್ರೇರಿತ ಬಂದ್ ಮಾಡಲಾಗಿದೆ.
ಗುಂಡುಪೇಟೆ ತಾಲೂಕಿನ ಬಂಡೀಪುರ ಮೂಲಕ ಕೇರಳಕ್ಕೆ ರಾತ್ರಿ ವೇಳೆ ವಾಹನ ಸಂಚಾರ ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ಪ್ರತಿನಿಧಿಸಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡಲಾಗಿದೆ.
Advertisement
Advertisement
ಬಂದ್ ಹಿನ್ನೆಲೆಯಲ್ಲಿ ರಾ.ಹೆ.766 ರಲ್ಲಿ ವಾಹನ ಸಂಚಾರ ಸ್ಥಗಿತವಾಗಿದ್ದು, ಬಂಡೀಪುರದ ಮದ್ದೂರು ಚೆಕ್ ಪೋಸ್ಟ್ ಬಳಿ ವಾಹನಗಳು ಸಾಲುಗಟ್ಟಿ ನಿಂತಿವೆ. ರಾತ್ರಿ ವಾಹನ ಸಂಚಾರದಿಂದ ಕಾಡು ಪ್ರಾಣಿಗಳು ಅಪಘಾತಕ್ಕೀಡಾಗುತ್ತವೆ ಎಂಬ ಕಾರಣಕ್ಕೆ ಸಂಚಾರವನ್ನು ನಿಷೇಧ ಮಾಡಲಾಗಿತ್ತು.
Advertisement
ಏನಿದು ಪ್ರಕರಣ?
ಹುಲಿ, ಆನೆ, ಕಾಡೆಮ್ಮೆ ಸೇರಿದಂತೆ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಅಪಘಾತದಿಂದ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ 2009ರಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 212 ಮತ್ತು 69 ರಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಚಾಮಾರಾಜನಗರ ಜಿಲ್ಲಾ ಆಡಳಿತ ಆದೇಶ ಹೊರಡಿಸಿತ್ತು. ವಾಹನಗಳ ಸಂಚಾರ ನಿಷೇಧವನ್ನು ರದ್ದುಪಡಿಸದಂತೆ ಕರ್ನಾಟಕ ಹೈಕೋರ್ಟ್ 2010ರಲ್ಲಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇರಳ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ. ಕೇರಳ ಸರ್ಕಾರ ಈ ಹಿಂದೆ ಸಾಕಷ್ಟು ಬಾರಿ ನಿಷೇಧ ತೆರವುಗೊಳಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿಕೊಂಡಿತ್ತು. ಕೇರಳದ ಲಾಬಿಗೆ ರಾಜ್ಯ ಸರ್ಕಾರ ಮಣಿದಿರಲಿಲ್ಲ.
Advertisement
ಪರಿಸ್ಥಿತಿಯನ್ನು ಅಧ್ಯಯನ ನಡೆಸಲು ಸುಪ್ರೀಂ ಕೋರ್ಟ್ ಕೇಂದ್ರ ಸಾರಿಗೆ ಸಚಿವಾಲಯದ ಮುಖ್ಯ ಕಾರ್ಯದರ್ಶಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಗಳ ಜೊತೆ ಕರ್ನಾಟಕ, ತಮಿಳುನಾಡು, ಕೇರಳದ ಸಾರಿಗೆ ಸಚಿವಾಲಯದ ಅಧಿಕಾರಿಗಳನ್ನು ಹೊಂದಿದ್ದ ಸಮಿತಿಯನ್ನು ರಚಿಸುವಂತೆ ಸೂಚಿಸಿತ್ತು.
ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಹಿಂದಿದ್ದ ನಾಲ್ಕೂ ಸರ್ಕಾರಗಳು ಸಮ್ಮತಿ ಸೂಚಿಸಿರಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಸಿಎಂ ಕುಮಾರಸ್ವಾಮಿ ಸರ್ಕಾರದ ಜೊತೆಗೂ ಕೇರಳ ಮಾತುಕತೆ ನಡೆಸಿತ್ತು.
ಬಲಿಯಾದ ಪ್ರಾಣಿಗಳ ಸಂಖ್ಯೆ ಎಷ್ಟು?
ರಾತ್ರಿ ಸಂಚಾರ ನಿಷೇಧಕ್ಕೂ ಮುನ್ನ ಅಂದ್ರೆ 2004-09ರ ಅವಧಿಯಲ್ಲಿ ಬಂಡಿಪುರ ಅರಣ್ಯ ಪ್ರದೇಶದಲ್ಲಿ 86 ಪ್ರಾಣಿಗಳು ಅಪಘಾತಕ್ಕೆ ಬಲಿಯಾಗಿವೆ. ರಾತ್ರಿ ಸಂಚಾರ ನಿಷೇಧ ಬಳಿಕ 2010-18ರ ಅವಧಿಯಲ್ಲಿ 17 ಪ್ರಾಣಿ ಮೃತಪಟ್ಟಿವೆ. ಒಟ್ಟಿನಲ್ಲಿ ರಾತ್ರಿ ವಾಹನ ಸಂಚಾರ ನಿಷೇಧದ ಬಳಿಕ ಅಪಘಾತದಲ್ಲಿ ಸತ್ತ ಪ್ರಾಣಿಗಳ ಸಂಖ್ಯೆ ಇಳಿಕೆಯಾಗಿತ್ತು. ಇದೀಗ ಮತ್ತೆ ಸಂಚಾರ ಮುಕ್ತ ಮಾಡಿದ್ರೆ ಮತ್ತೆ ಪ್ರಾಣಿಗಳು ಬಲಿಯಾಗುತ್ತವೆ ಅಂತ ಪ್ರಾಣಿಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಯಾವ ವರ್ಷದಲ್ಲಿ ಎಷ್ಟು ಪ್ರಾಣಿಗಳು ಪ್ರಾಣ ಕಳೆದುಕೋಂಡಿವೆ ಎಂಬ ವಿವರ ಈ ಕೆಳಗಿನಂತಿದೆ:
2004 – 32, 2005 – 7, 2007 – 41, 2008 – 2, 2009 – 2, 2010 – 3, 2011 – 7, 2012 – 10, 2013 – 6, 2014 – 1, 2015 – 2, 2016 – 1, 2017 – 2, 2018 – 2 ಪ್ರಾಣಿಗಳು ಮೃತಪಟ್ಟಿವೆ.