ಬೆಂಗಳೂರು: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದ ವ್ಯಾಪ್ತಿಯಲ್ಲಿ ಕಳೆದ ವರ್ಷ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಕಳೆದ ವರ್ಷದ ಫೆಬ್ರವರಿಯಲ್ಲಿ ಕುಂದುಕೆರೆ ವಲಯದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಗೆ 11,049 ಎಕರೆ ಅಮೂಲ್ಯ ಅರಣ್ಯ ಸಂಪತ್ತು ಆಹುತಿಯಾಗಿತ್ತು. ಬಂಡೀಪುರ ಅರಣ್ಯ ವಲಯದಲ್ಲಿ ಕಾಡ್ಗಿಚ್ಚು ಅಪರೂಪವೇನಲ್ಲ. ಆದರೆ ಕಳೆದ ವರ್ಷದ ಕಾಡ್ಗಿಚ್ಚಿಗೆ ಅರಣ್ಯ ಇಲಾಖೆಯ ಸ್ವಯಂ ತಪ್ಪುಗಳೇ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ಈ ಸಲ ಮುಂಚಿತವಾಗಿಯೇ ಎಚ್ಚೆತ್ತುಕೊಳ್ಳಲಿದೆಯಾ ಅನ್ನುವ ನಿರೀಕ್ಷೆ ಪರಿಸರ ಮತ್ತು ವನ್ಯ ಜೀವಿ ಸಂರಕ್ಷಣಾಕಾರರಲ್ಲಿ ಮನೆ ಮಾಡಿದೆ.
Advertisement
ಸದ್ಯ ಅರಣ್ಯ ಸಚಿವರಾಗಿರುವ ಸಿ.ಸಿ ಪಾಟೀಲ್, ಈ ಸಂಬಂಧ ಬೇಸಿಗೆ ಆರಂಭಕ್ಕೂ ಮುಂಚೆಯೇ ಮುಂಜಾಗರೂಕತೆ ತೆಗೆದುಕೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮೌಖಿಕ ಸೂಚನೆ ರವಾನಿಸಿದ್ದಾರೆ. ರಾಜ್ಯದ ಬಂಡೀಪುರ, ಕಪ್ಪತಗುಡ್ಡ, ನಾಗರಹೊಳೆ, ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ, ಸಕಲೇಶಪುರದ ಶುಂಠಿಕೊಪ್ಪ ಮುಂತಾದ ಪ್ರದೇಶದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸಚಿವ ಸಿ.ಸಿ ಪಾಟೀಲ್ ಖಡಕ್ಕಾಗಿ ಸೂಚನೆ ರವಾನಿಸಿದ್ದಾರೆ. ಅರಣ್ಯ ತಜ್ಞರ ಪ್ರಕಾರ ಒಮ್ಮೆ ಕಾಡು ನಾಶವಾದರೆ ಮತ್ತೆ ಅಂತಹ ಸಹಜ ಕಾಡು ಸೃಷ್ಟಿಯಾಗಲು ಮುನ್ನೂರು ವರ್ಷವಾದರೂ ಬೇಕಾಗಬಹುದು. ಹೀಗಾಗಿ ಬೇಸಿಗೆ ಆರಂಭದಲ್ಲೇ ಅಧಿಕಾರಿಗಳಿಗೆ ಎಚ್ಚರಿಕೆಯಿಂದ ಕೆಲಸ ಮಾಡಲು ಸಚಿವರು ಸೂಚನೆ ನೀಡಿದ್ದಾರೆ.
Advertisement
Advertisement
ಆದರೆ ಕಾಡ್ಗಿಚ್ಚು ಸಂಭವಿಸಿದರೆ ಬೆಂಕಿ ನಂದಿಸಲು ಆಧುನಿಕ ಸೌಕರ್ಯಗಳು ಇಲಾಖೆ ಬಳಿ ಇಲ್ಲ ಎನ್ನಲಾಗಿದೆ. ಗಸ್ತು ತಿರುಗಲು ವಾಹನಗಳು ಮತ್ತು ಅಗತ್ಯ ಅರಣ್ಯ ಸಿಬ್ಬಂದಿ ಕೊರತೆಯೂ ಸಾಕಷ್ಟಿದೆ. ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಕೆಳಹಂತದ ಸಿಬ್ಬಂದಿ ಕೊರತೆಯಿದೆ. ಕಾಡ್ಗಿಚ್ಚಿನ ಸಮಯದಲ್ಲಿ ಸಿಬ್ಬಂದಿ ಕೊರತೆ ಇದ್ದರೆ ಕಾರ್ಯಾಚರಣೆಗೆ ಹಿನ್ನಡೆಯಾಗುತ್ತದೆ. ಹೀಗಾಗಿ ಸರ್ಕಾರ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸುವತ್ತ ತುರ್ತು ಕ್ರಮ ಕೈಗೊಳ್ಳಲೇಬೇಕಿದೆ.