ಚಾಮರಾಜನಗರ: ಗರ್ಭಿಣಿಯೊಬ್ಬರು ಅರಣ್ಯ ಇಲಾಖೆಯ ವಾಹನದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗು ಹುಟ್ಟಿದ ಒಂದೇ ಗಂಟೆಯಲ್ಲಿ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಭೂತಾಣೆಪೋಡಿನ ಮಾದಮ್ಮ ತುಂಬು ಗರ್ಭೀಣಿಯಾಗಿದ್ದರು. ಹಾಗೆಯೇ ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ.
ತಕ್ಷಣ ಅಂಬುಲೆನ್ಸ್ ಕರೆ ಮಾಡಿದ್ದಾರೆ. ಆದರೆ ಅಂಬುಲೆನ್ಸ್ ಬರುವುದು ತಡವಾಗಿದೆ. ಹೀಗಾಗಿ ಬಿಳಿಗಿರಿರಂಗನ ಬೆಟ್ಟದ ಜಂಗಲ್ ಲಾಡ್ಜ್ ಬಳಿಯಿದ್ದ ಅರಣ್ಯ ಇಲಾಖೆಯ ಜಿಪ್ಸಿ ವಾಹನದಲ್ಲಿ ಸುಮಾರು 27 ಕಿ.ಮೀ ಅತ್ಯಂತ ವೇಗವಾಗಿ ಕರೆದುಕೊಂಡು ಚಾಮರಾಜನಗರಕ್ಕೆ ಬಂದಿದ್ದಾರೆ. ಚಾಮರಾಜನಗರ ಜಿಲ್ಲಾಸ್ಪತ್ರೆಯ ಮುಂಭಾಗಕ್ಕೆ ಬರುತ್ತಿದಂತೆಯೇ ಮಾದಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ್ದನ್ನ ಗಮನಿಸಿದ ನರ್ಸ್‍ಗಳು ಮಗುವನ್ನ ಎತ್ತಿಕೊಂಡು ಓಡಿ ಹೋಗಿ ಸುಮಾರು ಒಂದು ಗಂಟೆ ತೀವ್ರ ನೀಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತ ಪಟ್ಟಿದೆ ಎನ್ನಲಾಗಿದೆ.
ಈ ಬಗ್ಗೆ ಮಹಿಳೆ ಮಾತನಾಡಿ, ಹೊಟ್ಟೆ ನೋವು ಕಾಣಿಸಿಕೊಂಡ ತಕ್ಷಣ ಅಂಬುಲೆನ್ಸ್ ಗೆ ಕರೆ ಮಾಡಿದ್ವಿ. ಆವಾಗ ಅವರು ಅಂಬುಲೆನ್ಸ್ ಬೇರೆ ಕಡೆ ಇದೆ ಅಂದ್ರು. ಹೀಗಾಗಿ ಬೇರೆ ದಾರಿಯಲ್ಲದೆ ಫಾರೆಸ್ಟ್ ಜೀಪಿನಲ್ಲಿ ನನ್ನ ಕರೆದುಕೊಂಡು ಬಂದರು. ಆದರೆ ಆಸ್ಪತ್ರೆಗೆ ಬರುತ್ತಿದ್ದಂತೆಯೇ ಮಗುವಿಗೆ ಜನ್ಮ ನೀಡಿದೆ. ಮಗು 3 ಕೆ.ಜಿ ಇತ್ತು. ಜೀಪಿನಲ್ಲಿ ಬರುವಾಗ ಕುಲುಕಿ ಮಗು ತೀರಿಕೊಂಡಿತ್ತು ಎಂದು ಬೇಸರ ವ್ಯಕ್ತಪಡಿಸಿದರು.