ಮಂಡ್ಯ: ಶತಾಯ ಗತಾಯ ಮಂಡ್ಯದಲ್ಲಿ ಕುಮಾರಸ್ವಾಮಿ (HD Kumaraswamy) ಅವರನ್ನು ಮಣಿಸಬೇಕೆಂದು ತೊಡೆ ತಟ್ಟಿದ್ದ ಮಂಡ್ಯ ಕೈ ನಾಯಕರಿಗೆ ಇದೀಗ ತೀವ್ರ ಮುಖಭಂಗವಾಗಿದೆ. ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಸೋತರೆ ಮುಂದೆ ಕ್ಯಾಬಿನೆಟ್‌ನಲ್ಲಿ ಮಾತಾಡಲು ಆಗದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕನಾಗಿ ಇರಬೇಕಾಗುತ್ತೆ ಎಂದು ಸಚಿವ ಚಲುವರಾಯಸ್ವಾಮಿ ಬಹಿರಂಗವಾಗಿ ಹೇಳಿದ್ದರು. ಇದೀಗ ಆ ಹೇಳಿಕೆಯನ್ನು ಜೆಡಿಎಸ್ ಕಾರ್ಯಕರ್ತರು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ಪ್ರತಿ ಚುನಾವಣೆಯಲ್ಲೂ ತಮ್ಮ ಅಭ್ಯರ್ಥಿ ಗೆಲುವಿನ ವಿಚಾರದಲ್ಲಿ ನಾಯಕರು ತಮ್ಮ ಮಾತಿನಲ್ಲೆ ಪಂದ್ಯವನ್ನು ಕಟ್ಟಿಕೊಳ್ಳುತ್ತಾರೆ. ಅದೇ ರೀತಿ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಕದನದಲ್ಲೂ ಹಲವು ಪ್ರಸಂಗಗಳು ಜರುಗಿವೆ. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿಯನ್ನು ಸೋಲಿಸಲೇಬೇಕೆಂದು ಸಚಿವ ಚಲುವರಾಯಸ್ವಾಮಿ ಹಾದಿಯಾಗಿ ಮಂಡ್ಯ ಜಿಲ್ಲೆಯ ಕೈ ನಾಯಕರು ಹಾಗೂ ಮುಖಂಡರು ತೊಡೆ ತಟ್ಟಿದ್ರು. ಇದಲ್ಲದೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹಾಗೂ ಮಂಡ್ಯದ ಘಟಾನುಘಟಿ ನಾಯಕರು ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸೋ ನಿಟ್ಟಿನಲ್ಲಿ ಸಚಿವ ಚಲುವರಾಯಸ್ವಾಮಿ ಹಾಗೂ ಮಂಡ್ಯ ಜಿಲ್ಲೆಯ ಕೈ ಶಾಸಕರು ಟೊಂಕಕಟ್ಟಿ ನಿಂತಿದ್ರು. ಆದರೆ ಇದೀಗ ಮಂಡ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಯಾರೂ ಊಹೆ ಮಾಡದ ರೀತಿಯಲ್ಲಿ 2,84,620 ಮತಗಳ ಲೀಡ್ ತೆಗೆದುಕೊಂಡು ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಕುಮಾರಸ್ವಾಮಿ ವಿರುದ್ಧ ತೊಡೆ ತಟ್ಟಿದ್ದ ಕೈ ನಾಯಕರಿಗೆ ತೀವ್ರ ಮುಖ ಭಂಗವಾಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ- ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹ
ವೈರಲ್ ಹೇಳಿಕೆಯಲ್ಲಿ ಏನಿದೆ..?: ನಾಗಮಂಗಲದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಚಲುವರಾಯಸ್ವಾಮಿಯವರು (Chaluvarayaswamy) ಒಂದು ವೇಳೆ ಸ್ಟಾರ್ ಚಂದ್ರು ಸೋತರೆ ನನಗೆ ಕೆಲಸ ಮಾಡಲು ಮನಸ್ಸು ಬರಲ್ಲ. ನಾನು ಕ್ಯಾಬಿನೇಟ್‌ನಲ್ಲಿ ಟೇಬಲ್ ಕುಟ್ಟಿ ಮಾತಾಡೋಕೆ ಆಗಲ್ಲ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಾಸಕನಾಗಿ ಕೆಲಸ ಮಾಡಬೇಕಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಚಂದ್ರು ಸೋತರೆ ನಾನು ಅಳುವುದಿಲ್ಲ, ಬೇಜಾರ್ ಮಾಡಿಕೊಳ್ಳಲ್ಲ. ನಾನು ಯಾರ ಕೈಗೂ ಸಿಗಲ್ಲ ಎರಡು ತಿಂಗಳು ಯಾರ ಕೈಗೂ ಸಿಗದೇ ಪ್ರವಾಸಕ್ಕೆ ಹೋಗ್ತೀನಿ. ಬಳಿಕ ಫೋನ್ ನಂಬರ್ ಸ್ವೀಚ್ ಆಫ್ ಮಾಡಿಕೊಂಡು ರಾಜಕೀಯ ನಿವೃತ್ತಿ ಘೋಷಣೆ ಮಾಡಿ ನೆಮ್ಮದಿಯಾಗಿ ಇರಬೇಕಾಗುತ್ತೆ ಎಂಬ ಮಾತುಗಳನ್ನು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಅಂದು ಚಲುವರಾಯಸ್ವಾಮಿ ಬಹಿರಂಗ ಸಮಾವೇಶದಲ್ಲಿ ಹೇಳಿದ್ದ ಮಾತನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಕಾರ್ಯಕರ್ತರು ಹರಿಬಿಡುವ ಮೂಲಕ ಈಗ ಚಲುವರಾಯಸ್ವಾಮಿ ಏನ್ ಮಾಡ್ತಾರೆ ಎಂದು ಕೇಳ್ತಾ ಇದ್ದಾರೆ. ಇದಕ್ಕೆ ಚಲುವರಾಯಸ್ವಾಮಿ ಏನ್ ಕೌಂಟರ್ ಕೊಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.