DistrictsKarnatakaLatestMandya

ಚಲುವರಾಯಸ್ವಾಮಿ ಸಂಬಂಧಿಕರಿಂದ ಟ್ರ್ಯಾಕ್ಟರ್ ಹತ್ತಿಸಿ ರೈತರ ಹತ್ಯೆಗೆ ಯತ್ನ?

ಮಂಡ್ಯ: ಜಿಲ್ಲೆಯ ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಚಲುವರಾಯಸ್ವಾಮಿ ಅವರ ಸಂಬಂಧಿಕರು ಎನ್ನಲಾದವರಿಂದ ಟ್ರ್ಯಾಕ್ಟರ್ ಹತ್ತಿಸಿ ರೈತರ ಕುಟುಂಬವನ್ನು ಹತ್ಯೆ ಮಾಡಲು ಯತ್ನಿಸಿ ದರ್ಪ ಮೆರೆದಿರುವ ಘಟನೆಯೊಂದು ನಡೆದಿದೆ.

ಕೋರೆ ನಡೆಸಲು ಜಮೀನು ಕೊಡಲಿಲ್ಲ ಎಂದು ಟ್ರ್ಯಾಕ್ಟರ್ ಹತ್ತಿಸಿ ರೈತ ಕುಟುಂಬವನ್ನು ಕೊಲ್ಲಲು ಮುಂದಾಗಿದ್ದಾರೆ. ಬುಧವಾರ ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಜ್ಜಲಘಟ್ಟ ಗ್ರಾಮದ ರೈತ ಮರಿಗೌಡ ಹಾಗೂ ಅವರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಮರಿಗೌಡ ಅವರ ಜಮೀನಿನ ಪಕ್ಕದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ತೆಗೆದುಕೊಳ್ಳಲಾಗಿತ್ತು. ಹಾಗೆಯೇ ಮರಿಗೌಡರ ಜಮೀನಿನ ಮೇಲೂ ಕಣ್ಣು ಇಟ್ಟಿದ್ದ ಅವರು, ಜಮೀನನ್ನು ಬಿಟ್ಟು ಕೊಡಿ ಎಂದು ಕಿರಿಕ್ ತೆಗೆದಿದ್ದಾರೆ. ಆದರೆ ನಾನು ನನ್ನ ಜಮೀನಿನಲ್ಲಿ ತೆಂಗಿನ ಗಿಡ ನೆಟ್ಟಿದ್ದೇನೆ, ನಾನು ಇದನ್ನು ಬಿಟ್ಟು ಕೊಡಲ್ಲ ಎಂದು ಮರಿಗೌಡರು ನಿರಾಕರಿಸಿದ್ದರು.

ಇಷ್ಟಕ್ಕೆ ಕೋಪಗೊಂಡ  ಮಾಜಿ ಶಾಸಕರ ಸಂಬಂಧಿಕರು ಎನ್ನಲಾದವರು ತಮ್ಮ ಬೆಂಬಲಿಗರೊಂದಿಗೆ ಜಮೀನಿಗೆ ಬಂದು ಗಲಾಟೆ ಮಾಡಿದ್ದಾರೆ. ಜಮೀನಿನಲ್ಲಿದ್ದ ತೆಂಗಿನ ಗಿಡಗಳು ಮತ್ತು ಡ್ರಿಪ್ ಪೈಪ್‍ಗಳನ್ನು ಕಿತ್ತು ಹಾಕಿ ದರ್ಪ ಮೆರೆದಿದ್ದಾರೆ. ಇದಾದ ಬಳಿಕ ಮರಿಗೌಡರಿಗೆ ಹಾಗೂ ಅವರ ಮಗ, ಮಗಳು, ತಾಯಿ, ಹೆಂಡತಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆಗೆ ಮಾಡಲು ಯತ್ನಿಸಿದ್ದಾರೆ.

ರೈತ ಕುಟುಂಬದ ಮೇಲೆ ದರ್ಪ ಮೆರೆದಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ಸಂಬಂಧ ರೈತ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಮಾಜಿ ಶಾಸಕ ಚಲುವರಾಯ ಸ್ವಾಮಿ ಅವರ ಅಣ್ಣನ ಮಗ  ಉಮೇಶ್ ಪ್ರತಿಕ್ರಿಯಿಸಿ, ನನಗೂ ಅದಕ್ಕೂ ಸಂಬಂಧವಿಲ್ಲ. ನಾನು ರಾಜಿ ಪಂಚಾಯ್ತಿ ಮಾಡಲೆಂದು ಸ್ಥಳಕ್ಕೆ ತೆರಳಿದ್ದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published.

Back to top button