ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಟ್ಟ ಉಳಿಸಲು ಎಲ್ಲರನ್ನೂ ಎದುರು ಹಾಕಿಕೊಂಡರು. ಆಗ ಅವರೊಂದಿಗೆ ಡಿಕೆಶಿ ಒಬ್ಬರೇ ಇದ್ದರು. ಇಂದು ಅವರೊಂದಿಗೆ ಕುಮಾರಸ್ವಾಮಿ ನಿಲ್ಲಲಿಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರಿಗೆ ಇಂತಹ ಕಷ್ಟ ಬಂದಿದ್ದರೆ ಡಿ.ಕೆ.ಶಿವಕುಮಾರ್ ಸ್ಟೇಷನ್ ಹತ್ತಿರವೇ ಕೂರುತ್ತಿದ್ದರು. ಆದರೆ ಎಚ್‍ಡಿಕೆ ಡಿಕೆಶಿಗೆ ಕನಿಷ್ಟ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಲಿಲ್ಲ. ಒಕ್ಕಲಿಗ ಸಂಘಟನೆಗಳಿಂದ ನಡೆದ ಹೋರಾಟಕ್ಕೆ ಬಾರದೇ ಚನ್ನಪಟ್ಟಣದಲ್ಲಿ ಕಾರ್ಯಕ್ರಮ ಹಾಕಿಕೊಂಡರು. ಉದ್ದೇಶ ಪೂರ್ವಕವಾಗಿ ಚನ್ನಪಟ್ಟಣಕ್ಕೆ ಹೋಗಿದ್ರಾ? ಹೋರಾಟಕ್ಕೆ ಹೋಗುವ ಜನರಿಂದ ದೂರ ಉಳಿಯಲು ಹೋಗಿದ್ರಾ ಎಂದು ಡಿಕೆಶಿ ಪರ ಒಕ್ಕಲಿಗ ಸಮುದಾಯದ ಹೋರಾಟಕ್ಕೆ ಗೈರಾದ ಎಚ್‍ಡಿಕೆಗೆ ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.
Advertisement
Advertisement
ಡಿ.ಕೆ.ಶಿವಕುಮಾರ್ ಮಾಡಬಾರದ ಅಪರಾಧ ಮಾಡಿಲ್ಲ. ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆಗೆ ಮಾಡಿಕೊಳ್ಳಲೂ ಡಿಕೆಶಿ ಬಿಡಲಿಲ್ಲ. ಕಾಂಗ್ರೆಸ್ ರಕ್ಷಣೆ ಮಾಡಿಕೊಳ್ಳಲು ನಿಂತಿದ್ದರು. ಈ ಸಿಟ್ಟು ಬಿಜೆಪಿ ನಾಯಕರಿಗೆ ಡಿಕೆಶಿ ಮೇಲೆ ಇತ್ತು. ಈ ಹಿಂದೆ ದೇವೇಗೌಡರ ಕುಟುಂಬಕ್ಕೂ ಡಿಕೆಶಿಗೂ ವೈಮನಸ್ಸಿತ್ತು. ಹೀಗಾಗಿ ಇದೆಲ್ಲ ಚರ್ಚೆ ನಡೆಯುತ್ತಿದೆ. ಮುಂದೊಂದು ದಿನ ಸತ್ಯ ಹೊರಗಡೆ ಬರುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಕೆಶಿ ಬಂಧನಕ್ಕೆ ದೇವೇಗೌಡರ ಕುಟುಂಬ ಕಾರಣ ಎಂದು ದೂರಿದರು.
Advertisement
ಈ ಹಿಂದೆ ಒಕ್ಕಲಿಗ ಸಮುದಾಯ ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದಾಗ ಎಚ್‍ಡಿಕೆ ಭಾಗವಹಿಸಿರಲಿಲ್ಲ. ಇದಕ್ಕೆ ತಿರುಗೇಟು ನೀಡಿದ್ದ ಚೆಲುವರಾಯಸ್ವಾಮಿ, ಡಿಕೆಶಿಗೆ ದರೋಡೆ ಮಾಡೋದಕ್ಕೆ ನಾವು ಹೇಳಿದ್ವಾ, ಇದಕ್ಕೆಲ್ಲ ನಾನು ಹೊಣೆಯೇ? ಇದು ಮಾಜಿ ಸಿಎಂ ಕುಮಾರಸ್ವಾಮಿ ಬಾಯಿಂದ ಬಂದ ಮಾತುಗಳಂತೆ. ಮೈಸೂರಿನ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹೀಗೆಂದು ಎಚ್‍ಡಿಕೆ ಹೇಳಿದ್ದಂತೆ. ಡಿಕೆಶಿ ಪರ ಹೋರಾಟದ ಸಭೆಗೆ ಹೋಗಲಿಲ್ಲ ಎಂದು ದೂಷಣೆ ಮಾಡುತ್ತಿದ್ದಾರೆ. ಇಂತಹ ದರೋಡೆ ಮಾಡೋದಕ್ಕೆ ಹೇಳಿದ್ವಾ ನಾವು. ದರೋಡೆ ಮಾಡಿ ಸಾರ್ವಜನಿಕವಾಗಿ ಹಂಚುತ್ತಿದ್ದಾರಾ? ಇದಕ್ಕೆ ನಾನು ಹೊಣೆನಾ? ನಾನು ಸಭೆಗೆ ಯಾಕೆ ಹೋಗಬೇಕಿತ್ತು ಎಂದು ಸಭೆಯಲ್ಲಿ ಮಾತನಾಡಿದ್ದಾರಂತೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಿಚಾಯಿಸಿದ್ದಾರೆ.