Connect with us

Districts

ಮಂಡ್ಯ ಕ್ಷೇತ್ರವನ್ನ ಜೆಡಿಎಸ್‍ಗೆ ಕೊಡಬೇಕು ಅನ್ನೋದು ಕಾನೂನೇನು ಆಗಿಲ್ಲ: ಚಲುವರಾಯಸ್ವಾಮಿ

Published

on

ಮಂಡ್ಯ: ಲೋಕಸಭೆಗೆ ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಪಕ್ಷ ಹಾಗೂ ಕಾರ್ಯಕರ್ತರ ಹಿತ ದೃಷ್ಟಿಯಿಂದ ಜಿಲ್ಲೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳದಿರುವುದು ಒಳ್ಳೆಯದು ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಅಭ್ಯರ್ಥಿಯಾಗಲ್ಲ. ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಚುನಾವಣಾ ಆಯೋಗ ನಿನ್ನೆಯಷ್ಟೇ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ನಮ್ಮ ಪಕ್ಷದ ಮುಖಂಡರು ಇನ್ನು ಸಭೆ ಕರೆದಿಲ್ಲ. ಪಕ್ಷದ ಮುಖಂಡರು ಈ ಕುರಿತು ತೀರ್ಮಾನ ಮಾಡುತ್ತಾರೆ. ಆದರೆ ಕ್ಷೇತ್ರದ ಜನರ ಅಭಿಪ್ರಾಯವನ್ನು ನಾನು ಮುಖಂಡರಿಗೆ ತಿಳಿಸುತ್ತೇನೆ ಎಂದರು.

ದೇವೇಗೌಡರೇ ಹೇಳಿರುವಂತೆ ಹೊಂದಾಣಿಕೆ ಅನ್ನುವುದು ವಿಧಾನಸೌಧಕ್ಕೆ ಮಾತ್ರ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೇ ಈ ಹಿಂದೆ ನಡೆದ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಅವರೇ ಮುಂದೆ ನಿಂತು ಪ್ರಚಾರ ಮಾಡಿದ್ದಾರೆ. ಅಲ್ಲದೇ ಸ್ನೇಹಯುತ ಸ್ಪರ್ಧೆ ಮಾಡುವುದರಿಂದ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಜಿಲ್ಲೆಯಲ್ಲಿ 7 ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದರೂ ಕೂಡ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲಿದೆ. ಚುನಾವಣೆಯಲ್ಲಿ ಯಾರೇ ಗೆದ್ದರೂ 5 ರಿಂದ 10 ಸಾವಿರ ಮತಗಳ ಅಂತರದಿಂದ ಗೆಲ್ಲಬಹುದು ಅಷ್ಟೇ ಎಂದು ತಿಳಿಸಿದರು.

ಜೆಡಿಎಸ್ ಮುಖಂಡರ ವಿರುದ್ಧ ಅಕ್ರೋಶ: ಕಾಂಗ್ರೆಸ್ ಅವರು 80 ಜನ ಇಟ್ಟುಕೊಂಡು ನಮಗೆ ಮುಖ್ಯಮಂತ್ರಿ ಕೊಟ್ಟಿದ್ದಾರೆ ಎಂಬ ನಡವಳಿಕೆ ವಿಧಾನಸೌಧದಲ್ಲೂ ನಡೆಯುತ್ತಿಲ್ಲ, ರಾಜ್ಯದಲ್ಲೂ ನಡೆಯುತ್ತಿಲ್ಲ. ಪಕ್ಷ ತೀರ್ಮಾನ ಮಾಡಿದೆ ಎಂದು ನಾವು ಎಲ್ಲೂ ಮಾತನಾಡುತ್ತಿಲ್ಲ ಎಂದು ಜೆಡಿಎಸ್ ಪಕ್ಷದ ನಡವಳಿಕೆ ವಿರುದ್ಧ ಆಕ್ರೋಶ ಹೊರಹಾಕಿದರು.

ಕ್ಷೇತ್ರದ ಜನ ಮತ್ತು ಕಾರ್ಯಕರ್ತರು ಹೊಂದಾಣಿಕೆ ಬೇಡ ಎನ್ನುತ್ತಿದ್ದಾರೆ. ಆದರೆ ಮೈತ್ರಿ ಬಗ್ಗೆ ಅಂತಿಮವಾಗಿ ಪಕ್ಷದ ವರಿಷ್ಠರು ನಿರ್ಧಾರ ಮಾಡಲಿದ್ದಾರೆ. ಮಂಡ್ಯ ಕ್ಷೇತ್ರವನ್ನ ಜೆಡಿಎಸ್‍ಗೆ ಕೊಡಬೇಕು ಎಂಬ ಕಾನೂನು ಆಗಿಲ್ಲ. ಜೆಡಿಎಸ್ ಅವರು ಕೇಳುವುದು ಮಾಮೂಲಿ ಕೇಳುತ್ತಾರೆ. ಪಕ್ಷ ಹಾಗೂ ಕಾರ್ಯಕರ್ತರ ಹಿತ ದೃಷ್ಟಿಯಿಂದ ಹೊಂದಾಣಿಕೆ ಅಗತ್ಯವಿಲ್ಲ ಎಂಬುವುದು ನನ್ನ ಅಭಿಪ್ರಾಯ.

ಇದೇ ವೇಳೆ ಚುನಾವಣಾ ಆಯೋಗದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸಂವಿಧಾನ ಪೀಠದಲ್ಲಿರುವವರು ನೈಸರ್ಗಿಕ ನ್ಯಾಯದ ಬಗ್ಗೆಯೂ ಚಿಂತನೆ ಮಾಡಬೇಕು. ಚುನಾವಣೆ 6 ತಿಂಗಳಿಗಿಂತ ಹೆಚ್ಚು ದಿನ ಖಾಲಿ ಇರಬಾರದು ಎಂದಿದೆ. ಈಗಿನ ಚುನಾವಣೆ ಘೋಷಣೆ ಪ್ರಕಾರ ಡಿಸೆಂಬರ್ 12 ಕ್ಕೆ ಫಲಿತಾಂಶ ಬರುತ್ತದೆ. ಆಗಿನಿಂದ ಮಾರ್ಚ್ ವರೆಗೆ ಮಾತ್ರ ಸಂಸದರಾಗಿರುತ್ತಾರೆ. ಆದ್ದರಿಂದ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಇದ್ದಾಗ ಮತ್ತು ಅಗತ್ಯ ಇರುವ ಕಡೆ ಮಾತ್ರ ಚುನಾವಣೆ ನಡೆಸುವ ಬಗೆಗೆ ಸಂವಿಧಾನ ತಿದ್ದುಪಡಿ ಮಾಡಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *