ಮಂಡ್ಯ: ನಿಮ್ಮ ಋಣವನ್ನು ಸಾಯುವವರೆಗೂ ಮರೆಯುವುದಕ್ಕೆ ಆಗಲ್ಲ. ನೀವು ನಮಗೆ ಪುನರ್ಜನ್ಮ ಕೊಟ್ಟಿದ್ದೀರ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಂಡ್ಯ ಜನರಿಗೆ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲ್ಲ. ಅವರ ರೂಪದಲ್ಲಿ ಕಾಣುವ ನಿಮ್ಮೆಲ್ಲರಿಗೆ ಜನ್ಮದಿನದ ಶುಭಾಶಯ ಕೋರುತ್ತೇನೆ. ಸುಮಲತಾ ಅಮ್ಮನಿಗೆ ಸಹಕಾರ, ಬೆಂಬಲ ಕೊಟ್ಟಿದ್ದೀರ. ಮಂಡ್ಯದಲ್ಲಿ ನಿಂತು ಮಾತನಾಡುವ ಯೋಗ್ಯತೆ ಕೊಟ್ಟಿದ್ದೀರಿ. ಇಲ್ಲಿಯೇ ನಿಂತು ನಿಮ್ಮ ಪಾದಗಳಿಗೆ ನಮಸ್ಕರಿಸುತ್ತೇನೆ ಎಂದು ಬಾಗಿ ವೇದಿಕೆಗೆ ನಮಸ್ಕರಿಸಿದರು.
ಒಂದು ವೇಳೆ ನಾವು ಈ ಚುನಾವಣೆ ಹಬ್ಬದಲ್ಲಿ ಸೋಲು ಕಂಡಿದ್ದರೆ ನಮ್ಮ ಪರಿಸ್ಥಿತಿ ಬಹಳ ಕಷ್ಟವಾಗುತಿತ್ತು. ಕೆಲವರು ತಮ್ಮ ಪಕ್ಷದ ನಾಯಕರನ್ನು ಎದುರು ಹಾಕಿಕೊಂಡು ನಮ್ಮ ಪರ ಪ್ರಚಾರಕ್ಕೆ ನಿಂತರು. ನಿಮ್ಮ ಸಹಕಾರ, ಬೆಂಬಲ, ಪ್ರೀತಿಗೆ ನಾನು ಋಣಿಯಾಗಿದ್ದೇನೆ ಎಂದರು.
ತಪ್ಪು ತಿಳಿಯಬೇಡಿ, ಕೆಲವರಿಗೆ ರಾಜಕೀಯ ನಾಯಕರ ಕಾರ್ಯವನ್ನು ತಿಳಿಸಬೇಕಿದೆ. ಸಂಸದರ ಕೆಲಸ ಏನು? ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಕೆಲಸ ಏನು ಅಂತ ಅರಿವು ಮೂಡಿಸಬೇಕಿದೆ. ನಮ್ಮ ಮನೆ ಮೋರಿ ಕಟ್ಟಿದೆ ಬನ್ನಿ ಎಂದು ಶಾಸಕರಿಗೆ ಹೇಳುವುದಕ್ಕೆ ಆಗುತ್ತಾ? ಹಾಗೆಯೇ ನಾಯಕರು ತಮ್ಮ ವ್ಯಾಪ್ತಿಯ ಕಾರ್ಯವನ್ನು ಮಾಡುತ್ತಾರೆ ಎಂದು ತಿಳುವಳಿಕೆ ಮೂಡಿಸುವ ಪ್ರಯತ್ನ ನಡೆಸಿದರು.
ಇದೇ ವೇಳೆ ಅಭಿಷೇಕ್‍ನನ್ನು ಕರೆದು, ಮಗು ಚಿಕ್ಕ ಸಿನಿಮಾ ಮಾಡಿದೆ ಹಾರೈಸಿ. ಅಭಿ ನಮಗಿಂತ ಚಿಕ್ಕವನಾದರೂ ಸ್ಕ್ರೀನ್‍ನಲ್ಲಿ ರೊಮಾನ್ಸ್ ಮಾಡುವಾಗ ನಮಗಿಂತ ದೊಡ್ಡವನಾಗಿ ಕಾಣುತ್ತಾನೆ ಎಂದು ಕಿಚಾಯಿಸಿದರು.