Bengaluru City
ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದರ್ಶನ್-ಅಭಿಮಾನಿಗಳು ಫುಲ್ ಖುಷ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಹೊಸ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ದರ್ಶನ್ ಅವರ ಹೊಸ ಲುಕ್ ನೋಡಬೇಕಂದ್ರೆ ಇನ್ನೊಂದು ವರ್ಷ ಕಾಯಬೇಕಾಗುತ್ತದೆ. ದರ್ಶನ್ ತಮ್ಮ ಮುಂದಿನ 51ನೇ ಸಿನಿಮಾದಲ್ಲಿ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದರ್ಶನ್ ಈಗ ವರ್ಷಕ್ಕೆ ಒಂದೇ ಸಿನಿಮಾ ಮಾಡುತ್ತಾರೆ. ಸದ್ಯಕ್ಕೆ ತಾರಕ್ ಮುಗಿಸಿದ್ದಾರೆ. ಅದರಲ್ಲಿ ರಗ್ಬಿ ಆಟಗಾರನ ಒಂದು ಶೇಡ್ ಕೂಡ ಬರುತ್ತದೆ. ಈಗ ಕುರುಕ್ಷೇತ್ರದಲ್ಲಿ ದುರ್ಯೋಧನ ಪಾತ್ರಕ್ಕೆ ಗದೆ ಎತ್ತಿ ಹಿಡಿದಿದ್ದಾರೆ. ದರ್ಶನ್ ಅವರ ಮುಂದಿನ 51ನೇ ಚಿತ್ರಕ್ಕೆ ನಿರ್ದೇಶಕ ಪವನ್ ಒಡೆಯರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ದರ್ಶನ್ ಇಲ್ಲಿವರೆಗೆ ಮಾಡದ ಪಾತ್ರಕ್ಕೆ ಒಡೆಯರ್ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದು, ಅದಕ್ಕಾಗಿ ಬಾಕ್ಸಿಂಗ್ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಕುರುಕ್ಷೇತ್ರದ ಶೂಟಿಂಗ್ ನಡುವೆಯೇ ಈ ಕೆಲಸವೂ ನಡೆಯಲಿದೆಯಂತೆ. ಈ ಮೊದಲು ದರ್ಶನ್ `ಒಡೆಯರ್’ ನಲ್ಲಿ ಲವ್ವರ್ ಬಾಯ್ ಪಾತ್ರ ಮಾಡುತ್ತಾರೆ, ಅದಕ್ಕೆ ಹಲವು ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಈಗ ನೋಡಿದರೆ ನಯಾ ಬ್ರೇಕಿಂಗ್ ನ್ಯೂಸ್ ಬಂದಿದೆ.
ಕನ್ನಡದಲ್ಲಿ ಆಟವನ್ನೇ ಮುಖ್ಯ ಕಥಾ ಹಂದರವಾಗಿಟ್ಟುಕೊಂಡು ಬಂದ ಸಿನಿಮಾಗಳು ತುಂಬಾ ಕಡಿಮೆ. 1978ರಲ್ಲಿ ಡಾ.ರಾಜ್‍ಕುಮಾರ್ ಅಭಿನಯದ `ತಾಯಿಗೆ ತಕ್ಕ ಮಗ’ ಸಿನಿಮಾದಲ್ಲಿ ಅಣ್ಣಾವ್ರು ಬಾಕ್ಸರ್ ಆಗಿ ನಟಿಸಿದ್ದರು. ಇದಾದ ಬಳಿಕ ಶಿವರಾಜ್ ಕುಮಾರ್ ಸಹ `ಯುವರಾಜ’ ಸಿನಿಮಾದಲ್ಲಿ ಬಾಕ್ಸರ್ ಪಾತ್ರದಲ್ಲಿ ನಟಿಸುವ ಮೂಲಕ ಮಿಂಚಿದ್ದರು.
