ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಳೆದ ಕೆಲವು ದಿನಗಳಿಂದ ಪ್ರಚಾರ ಮಾಡುತ್ತಿದ್ದು, ಇಂದು ತಮ್ಮ ಪ್ರಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ಮೈಸೂರಿಗೆ ತೆರಳಿದ್ದಾರೆ.
ಕಳೆದ ಕೆಲ ದಿನಗಳಿಂದ ಪ್ರಚಾರ ಮಾಡಿದ್ದರಿಂದ ದರ್ಶನ್ ಅವರಿಗೆ ಗಂಟಲು ನೋವು, ಕೈನೋವು ಕಾಣಿಸಿಕೊಂಡಿತ್ತು. ಗಂಟಲು ನೋವಿದ್ದರೂ ಪ್ರಚಾರದಲ್ಲಿ ದರ್ಶನ್ ಭಾಗಿಯಾಗಿದ್ದರು. ಇಂದು ಪ್ರಚಾರ ನಡೆಸುತ್ತಿದ್ದಾಗ ಮೈಕ್ ಆಗಾಗ ಕೈ ಕೊಡುತಿತ್ತು. ಗಂಟಲು ಕಟ್ಟಿಕೊಂಡಿದ್ದ ಕಾರಣ ಮೈಕ್ ಇಲ್ಲದೆ ಭಾಷಣ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಇಂದು ಕೇವಲ ನಾಲ್ಕು ಊರುಗಳಲ್ಲಿ ಮಾತ್ರ ಪ್ರಚಾರ ಮಾಡಿ ನಂತರ ತಮ್ಮ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
Advertisement
Advertisement
ನಾಳೆ ಮತ್ತೆ ದರ್ಶನ್ ತಮ್ಮ ಪ್ರಚಾರ ಮುಂದುವರಿಸಲಿದ್ದಾರೆ. ಇತ್ತ ದರ್ಶನ್ ವಾಪಸ್ ಹೋದ ವಿಷಯ ಗೊತ್ತಿಲ್ಲದೇ ಹೆಮ್ಮನಹಳ್ಳಿ, ಸೋಮನಹಳ್ಳಿ ಸೇರಿ ಹಲವು ಗ್ರಾಮಗಳ ಜನ ರಸ್ತೆಯಲ್ಲಿ ಸಾರಥಿಗಾಗಿ ಕಾದು ನಿಂತಿದ್ದಾರೆ.
Advertisement
ಎಲ್ಲೆಲ್ಲಿ ಪ್ರಚಾರ:
ಮದ್ದೂರು ತಾಲೂಕಿನ ಗ್ರಾಮಗಳಲ್ಲಿ ಸಾರಥಿ ಅಬ್ಬರದ ಪ್ರಚಾರ ನಡೆಸಿದ್ದರು. ಮಲ್ಲನಕುಪ್ಪೆಯಲ್ಲಿ ಇಂದು ಪ್ರಚಾರ ಆರಂಭಿಸಿದ ದರ್ಶನ್ ಸುಮಲತಾ ಪರ ದರ್ಶನ್ ಮತಯಾಚನೆ ಮಾಡಿದ್ರು. ಮದ್ದೂರಿನ ಮಲ್ಲನಕುಪ್ಪೆ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿಗೆ ಶುಭ ಕೋರಿದರು. ದರ್ಶನ್ ಪ್ರಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಬಾವುಟಗಳು ಹಾರಾಡುವುದು ಕಂಡುಬಂತು. ದರ್ಶನ್‍ಗೆ ನಟ, ಸ್ನೇಹಿತ ರವಿಚೇತನ್ ಸಾಥ್ ನೀಡಿದ್ದರು.
Advertisement
ಮದ್ದೂರಿನ ಕೆಸ್ತೂರಿನಲ್ಲಿ ದರ್ಶನ್‍ಗೆ ಭವ್ಯ ಸ್ವಾಗತ ಸಿಕ್ಕಿದ್ದು, ಗ್ರಾಮಸ್ಥರು ಬೃಹತ್ ಸೇಬಿನ ಹಾರ ಹಾಕಿದರು. ಈ ವೇಳೆ ಜೆಡಿಎಸ್‍ನ ಸ್ಥಳೀಯ ಮುಖಂಡ ಧನಂಜಯ್ ಅವರು, ಪ್ರಚಾರ ವಾಹನ ಹತ್ತಿ ಸುಮಲತಾ ಪರ ಬೆಂಬಲ ಘೋಷಿಸಿದ್ರು.
ಅಂತಿಮ ಹಂತದ ಪ್ರಚಾರ ಕಣದಲ್ಲಿ ದರ್ಶನ್ ಭಾಷಣ ಮಾಡಿದ್ದು, ಮತಗಳನ್ನು ಮಾರಿಕೊಳ್ಳದಂತೆ ಜನತೆಗೆ ಮನವಿ ಮಾಡಿದ್ರು. ಹಣಕ್ಕೆ ಮತ ಮಾರಿಕೊಳ್ಳಬೇಡಿ. ಸ್ವಾಭಿಮಾನದ ಮತಗಳನ್ನು ಸುಮಲತಾರಿಗೆ ಹಾಕುವಂತೆ ದರ್ಶನ್ ಕೇಳಿಕೊಂಡರು. ಇದೇ ವೇಳೆ ಪ್ರಚಾರದ ಮೈಕ್ ಕೂಡ ಕೈ ಕೊಟ್ಟಿತು. ಈ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ಸರಿಯಾಗಿ ಭಾಷಣ ಮಾಡಲು ಸಾಧ್ಯವಾಗಿಲ್ಲ.
ಮದ್ದೂರಿನ ತೂಬಿನಕೆರೆಯಲ್ಲಿ ಅಭಿಮಾನಿಗಳು ಬೃಹತ್ ರೇಷ್ಮೆ ಗೂಡಿನ ಹಾರ ಹಾಕಿದ್ರು. ಎರಡು ಜೆಸಿಬಿ ಮೂಲಕ ಬೃಹತ್ ರೇಷ್ಮೆ ಗೂಡಿನ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು. ಮದ್ದೂರಿನ ಕೆಸ್ತೂರಿನಲ್ಲಿ ಮಾತನಾಡುವಾಗಲೂ ಮೈಕ್ ಕೈ ಕೊಡ್ತಿದ್ದ ಕಾರಣ ದರ್ಶನ್ ಸಿಟ್ಟಾದ್ರು. ಅಲ್ಲದೆ ತಮ್ಮ ಕೈಲಿದ್ದ ಮೈಕನ್ನು ಕೆಳಕ್ಕೆ ಎಸೆದ ಪ್ರಸಂಗವೂ ನಡೆಯಿತು.