ಬೆಂಗಳೂರು: ಅಂಡು ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ನಟ ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್‍ಮೆನ್’ ಸಿನಿಮಾದ ಆಡಿಯೋ ಲಾಂಚ್ ಮಾಡಿ ಮಾತನಾಡಿದ ದರ್ಶನ್, ಯಾವುದಾದರೂ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಹೋಗಿ ಚಿತ್ರತಂಡಕ್ಕೆ ಶುಭಕೋರಿ ಹೋಗುತ್ತೀವಿ. ಆದರೆ ಈ ಬಾರಿ ನಾನು ಚಿತ್ರತಂಡಕ್ಕೆ ಶುಭಕೋರಲ್ಲ. ದಯವಿಟ್ಟು ನಮ್ಮ ಕನ್ನಡ ಜನ ಎದ್ದೇಳಿ. ಯಾಕೆ ಈ ಮಾತನ್ನು ಹೇಳುತ್ತಿದ್ದೀನಿ ಎಂದರೆ ನಟ ಸಂಚಾರಿ ವಿಜಯ್ ದೊಡ್ಡ ನಟ. ‘ನಾನು ಅವನಲ್ಲ ಅವಳು’ ಸಿನಿಮಾ ನೋಡಿ ಅವರಿಗೆ ಫಿದಾ ಆದೆ. ಒಂದು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಆದರೆ ಪರಭಾಷೆಯಲ್ಲಿ ಆಗಿದ್ರೆ ಕನ್ನಡದವರು ಸೇರಿ ಬೆನ್ನು ತಟ್ಟಿ, ಚಪ್ಪಾಳೆ ತಟ್ಟಿ ಜೊತೆಗೆ ದುಡ್ಡು ಕೊಟ್ಟು ಕಳುಹಿಸುತ್ತೇವೆ ಎಂದರು.
ನಿಜವಾಗಿಯೂ ಅಸಹ್ಯವಾಗುತ್ತದೆ. ನಾವು ಹೆಮ್ಮೆಯಿಂದ ಕನ್ನಡದವರು ಎಂದು ಹೇಳುತ್ತೇವೆ. ಆದರೆ ನಾವು ಏನೂ ಮಾಡಲ್ಲ. ಈಕಡೆ ಆಕಡೆಯವರನ್ನು ನೋಡಿಕೊಂಡು ನಮ್ಮವರನ್ನು ನಾವು ಬಿಟ್ಟು ಬಿಡುತ್ತೇವೆ. ಸ್ವಲ್ಪ ಅಂಡು ಬಗ್ಗಿಸಿ ಕನ್ನಡ ಸಿನಿಮಾ ನೋಡಿ. ಆಗ ಕನ್ನಡ ಸಿನಿಮಾ ಏನು ಎಂಬುದು ಗೊತ್ತಾಗುತ್ತದೆ ಎಂದರು.
ಕೆಲವರು ನಾನು ತಮಿಳಿನಲ್ಲಿ ಆ ಸಿನಿಮಾ ನೋಡಿದೆ, ತೆಲುಗಿನಲ್ಲಿ ಈ ಸಿನಿಮಾ ನೋಡಿದೆ ಎಂದು ಹೇಳುತ್ತಾರೆ. ಮೊದಲು ನಮ್ಮವರನ್ನು ನಾವು ಬೆನ್ನು ತಟ್ಟೋಣ. ಕನ್ನಡ ಸಿನಿಮಾ ಪ್ರೋತ್ಸಾಹ ಕೊಡಿ. ಜೊತೆಗೆ ಕನ್ನಡ ಸಿನಿಮಾಗೆ ಆದ್ಯತೆ ಕೊಡಿ ಎಂದು ಮನವಿ ಮಾಡಿಕೊಂಡರು.