ಕೊಡಗಿನ ಕುವರಿ ಸನಾ ತಿಮ್ಮಯ್ಯ ಪ್ರಕಾರ ಒಡೆಯ ಅಂದರೆ

Public TV
2 Min Read
Odeya Main e1614595211497

ಸಂದೇಶ್ ನಾಗರಾಜ್ ಅರ್ಪಿಸಿ, ಎನ್ ಸಂದೇಶ್ ನಿರ್ಮಾಣ ಮಾಡಿರುವ ಒಡೆಯ ಚಿತ್ರ ಈ ವಾರ ತೆರೆಗಾಣುತ್ತಿದೆ. ಈ ಮೂಲಕ ಅದೆಷ್ಟೋ ಕಾಲದಿಂದ ಅಭಿಮಾನಿಗಳಲ್ಲಿ ನಿಗಿನಿಗಿಸುತ್ತಿದ್ದ ಕಾತರ, ನಿರೀಕ್ಷೆಗಳೆಲ್ಲವೂ ಸಾಕಾರಗೊಳ್ಳುವ ಕ್ಷಣಗಳಿಗೆ ಕೌಂಟ್ ಡೌನ್ ಶುರುವಾಗಿದೆ. ಈ ಸಿನಿಮಾ ಆರಂಭವಾದ ಕ್ಷಣದಿಂದಲೇ ಇದರ ನಾಯಕಿ ಯಾರಾಗುತ್ತಾರೆಂಬ ಕುತೂಹಲ ಹುಟ್ಟಿಕೊಂಡಿತ್ತು. ಈ ಸಾಲಿನಲ್ಲಿ ಒಂದಷ್ಟು ಲೀಡ್ ನಟಿಯರ ಹೆಸರುಗಳೂ ತೇಲಿ ಹೋಗಿದ್ದವು. ಆದರೆ ಕಡೆಯೂ ಒಡೆಯನ ಒಡತಿಯಾಗಿ ನಿಕ್ಕಿಯಾಗಿದ್ದು ಕೊಡಗಿನ ಕುವರಿ ರಾಘವಿ ತಿಮ್ಮಯ್ಯ. ಮೊದಲ ಹೆಜ್ಜೆಯಲ್ಲಿಯೇ ಎಲ್ಲರೂ ಹುಬ್ಬೇರಿಸುವಂಥಾ ಅವಕಾಶ ಗಿಟ್ಟಿಸಿಕೊಂಡಿದ್ದ ರಾಘವಿಯ ಲಕ್ಕು ಈ ಸಿನಿಮಾ ಮೂಲಕವೇ ಬದಲಾಗೋ ಲಕ್ಷಣಗಳಿವೆ. ಈ ಕಾರಣದಿಂದಲೇ ಅವರು ಹೆಸರು ಬದಲಾವಣೆ ಮಾಡಿಕೊಂಡು ಇದೀಗ ಸನಾ ತಿಮ್ಮಯ್ಯ ಆಗಿ ಅವತರಿಸಿದ್ದಾರೆ.

Odeya

ಚಾಲೆಂಜಿಂಗ್ ಸ್ಟಾರ್‌ಗೆ ನಾಯಕಿಯಾಗಬೇಕೆಂಬ ಆಸೆ ಮತ್ತು ಪೈಪೋಟಿ ಲೀಡ್ ನಟಿಯರ ವಲಯದಲ್ಲಿಯೇ ಇರುತ್ತದೆ. ಹಾಗಿರುವಾಗ ಹೊಸಾ ಹುಡುಗಿ ಸನಾ ಅವಕಾಶವನ್ನು ತನ್ನದಾಗಿಸಿಕೊಂಡಾಗ ಸಹಜವಾಗಿಯೇ ಎಲ್ಲರೂ ಹೆಬ್ಬೇರಿಸಿದ್ದರು. ಆದರೆ ಇಲ್ಲಿರೋ ತನ್ನ ಸವಾಲಿನಂಥಾ ಪಾತ್ರವನ್ನು ಸನಾ ಎಲ್ಲರೂ ಮೆಚ್ಚಿಕೊಳ್ಳುವಂತೆಯೇ ನಿಭಾಯಿಸಿದ್ದಾರಂತೆ. ಅದು ಸಾಧ್ಯವಾದದ್ದು ದರ್ಶನ್ ಹಾಗೂ ಇಡೀ ಚಿತ್ರತಂಡದ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದಲೇ ಅನ್ನೋದು ಸನಾ ಅಭಿಪ್ರಾಯ. ಈ ನಿಟ್ಟಿನಲ್ಲಿ ಒಡೆಯ ಅಂದರೆ ಅವರ ಪಾಲಿಗೆ ಮಾರ್ಗದರ್ಶಕ ಮತ್ತು ಆತ್ಮಬಂಧು. ತನಗೆ ಇಂಥಾದ್ದೊಂದು ಅವಕಾಶ ಕೊಟ್ಟಿರೋ ಸಂದೇಶ್ ಪ್ರೊಡಕ್ಷನ್ಸ್ ಬಗ್ಗೆಯೂ ಸನಾಗೆ ಅಪಾರವಾದ ಗೌರವಾಧರಗಳಿವೆ.

ಸನಾಗೆ ಆರಂಭಿಕ ಹೆಜ್ಜೆಯಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸೋ ಅವಕಾಶ ಕೂಡಿ ಬಂದಿರೋದರ ಬಗ್ಗೆ ಖುಷಿಯಿದೆ. ಸವಾಲಿನಂಥಾ ನಾಯಕಿಯ ಪಾತ್ರವನ್ನೂ ಸಮರ್ಥವಾಗಿ ನಿರ್ವಹಿಸಿರೋದರ ಬಗ್ಗೆ ಹೆಮ್ಮೆಯೂ ಇದೆ. ಇದರ ಜೊತೆ ಜೊತೆಗೇ ಒಡೆಯ ಕನ್ನಡಿಗರೆಲ್ಲರ ಪ್ರೀತಿ ಸಂಪಾದಿಸುವಂಥಾ ಹೆಮ್ಮೆಯ ಚಿತ್ರವಾಗಿ ಮೂಡಿ ಬಂದಿದೆಯೆಂಬ ಭರವಸೆ, ಅದು ದೊಡ್ಡ ಮಟ್ಟದಲ್ಲಿಯೇ ಗೆಲುವು ಕಾಣಲಿದೆ ಎಂಬ ನಂಬಿಕೆ ಸನಾರದ್ದು. ಇದೆಲ್ಲ ಏನೇ ಇದ್ದರೂ ಚೊಚ್ಚಲ ಚಿತ್ರದಲ್ಲಿಯೇ ದರ್ಶನ್ ನಾಯಕಿಯಾದ ಸನಾ ಅದೃಷ್ಟ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತೆ. ಸಿನಿಮಾ ಬಿಡುಗಡೆಯಾದ ನಂತರ ಸನಾ ನಟನೆಯನ್ನು ನೋಡಿಯೂ ಅದೇ ಅಚ್ಚರಿ ಮತ್ತೆ ಮಿರುಗುವಂತಾಗೋದರಲ್ಲಿ ಯಾವ ಸಂದೇಹವೂ ಇಲ್ಲ.

Share This Article
Leave a Comment

Leave a Reply

Your email address will not be published. Required fields are marked *