ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಕೇಳಿ ಬರುತಿತ್ತು. ಇದಕ್ಕೆ ಸ್ವತಃ ದರ್ಶನ್ ಪ್ರತಿಕ್ರಿಯಿಸಿ ಕಂಡ ಕಂಡವರಿಗೆ ಸಲಾಮು ಒಡೆಯುವ ಜಾಯಮಾನ ನನ್ನದಲ್ಲ. ಸಲಾಮು ಸಂಸ್ಕøತಿ ಇರುವ ರಾಜಕಾರಣ ನನಗೆ ಹೊಂದಿಕೆ ಆಗುವುದಿಲ್ಲ. ಹೀಗಾಗಿ ರಾಜಕೀಯಕ್ಕೆ ಸೇರುವ ಆಸಕ್ತಿಯೂ ನನಗಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.
ಶಾಸಕ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದ ಶೂಟಿಂಗ್ ವೇಳೆ ಪ್ರತಿಕ್ರಿಯಿಸಿದ ಅವರು, ನಾನೊಬ್ಬ ಸಿನಿಮಾ ನಟ, ರಾಜಕೀಯಕ್ಕೆ ಬರುವುದಾಗಿ ಹಬ್ಬಿರುವ ಸುದ್ದಿಗಳು ಸುಳ್ಳು. ಹಾಗೊಂದು ವೇಳೆ ನಾನು ರಾಜಕೀಯಕ್ಕೆ ಹೋಗುವುದೇ ಆದರೆ ಮೊದಲೇ ಬಹಿರಂಗವಾಗಿ ಹೇಳಿಯೇ ಹೋಗುತ್ತೇನೆ. ಗುಟ್ಟಾಗಿ ರಾಜಕೀಯಕ್ಕೆ ಹೋಗುವ ಅಗತ್ಯ ಹಾಗೂ ಅನಿವಾರ್ಯತೆ ನನಗಿಲ್ಲ. ಅಲ್ಲದೆ ಗುಟ್ಟಾಗಿ ರಾಜಕೀಯ ಮಾಡಕ್ಕೂ ಆಗಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್‍ಗೆ ಸೇರ್ಪಡೆಯಾಗ್ತೀರಾ: ಮಾಧ್ಯಮಗಳ ಪ್ರಶ್ನೆಗೆ ದರ್ಶನ್ ತಾಯಿ ಪ್ರತಿಕ್ರಿಯೆ ಹೀಗಿತ್ತು
ಸದ್ಯಕ್ಕೆ ನನ್ನ ಹೆಸರಿನ ಸುತ್ತ ಏನೇ ರಾಜಕೀಯದ ಮಾತು, ಸುದ್ದಿಗಳು ಕೇಳಿಬಂದರೆ ಅದು ಸುಳ್ಳು. ರಾಜಕಾರಣದಲ್ಲಿರುವವರು ಕಂಡ ಕಂಡವರಿಗೆ ಕೈ ಮುಗಿಯಬೇಕು. ಖಾದಿ ತೊಟ್ಟರೆ ಹೆಜ್ಜೆ ಹೆಜ್ಜೆಗೂ ಸಲಾಮು ಹೊಡೆಯಬೇಕು. ಸಲಾಮು ಹೊಡೆಯದಿದ್ದರೆ ಈ ರಾಜಕೀಯ ಪಡಸಾಲೆಯಲ್ಲಿ ನಾವು ಬಾಳಿಕೆ ಬರಲ್ಲ ಅಂತ ನನಗೆ ಗೊತ್ತು. ಆದರೆ ನನಗೆ ಯಾರ ಮುಂದೆಯೂ ಸಲಾಮು ಮಾಡುವ ಅಭ್ಯಾಸವಿಲ್ಲ. ಅಂಥ ವಾತಾವರಣದಲ್ಲಿ ನಾನು ಬೆಳೆದಿಲ್ಲ ಎಂದು ಪ್ರತಿಕ್ರಿಯಿಸಿದರು.
ಓಟು ಹಾಕಿದ ಜನ ಕೂಡ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇದೆಲ್ಲ ನಮಗೆ ಯಾಕೆ ಬೇಕು ಹೇಳಿ. ರಾಜಕಾರಣ ಅಂದ ಮೇಲೆ ಅದೆಲ್ಲವೂ ಇರುತ್ತದೆ ನಿಜ, ಆದರೂ ನನಗೆ ಅಂತ ವಾತಾವರಣ ಆಗಿ ಬರಲ್ಲ. ಹೀಗಾಗಿ ಸಿನಿಮಾ ಬಿಟ್ಟು ನಾನು ರಾಜಕೀಯ ಸೇರುತ್ತೇನೆ ಎಂಬುದು ಸುಳ್ಳು. ಸದ್ಯಕ್ಕೆ ಸಿನಿಮಾ ಮಾಡಿಕೊಂಡು ಇರುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯಕ್ಕೆ?
https://youtu.be/fwAT9FG_4-g