ಮಂಡ್ಯ: ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎನ್ನುವ ದರ್ಶನ್ ಹೇಳಿಕೆಯನ್ನು ಸ್ವಾಗತಿಸಿರುವ ಮಂಡ್ಯ ಜನ, ಕೇವಲ ಹೇಳಿಕೆಯಿಂದ ಏನೂ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ದರ್ಶನ್ ಅವರೂ ಮುಂಚೂಣಿಯಲ್ಲಿ ನಿಂತು ಹೋರಾಟ ರೂಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ದರ್ಶನ್ ಎಂಟು ತಾಲೂಕುಗಳಲ್ಲಿ ನಿರಂತರ ಪ್ರವಾಸ ಮಾಡಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿದರು. ಆ ವೇಳೆ ಅವರು ರೈತರ ಕಷ್ಟಗಳನ್ನು ಗಮನಿಸಿದ್ದಾರೆ. ಹೀಗಾಗಿ ರೈತರ ಸಾಲಮನ್ನಾ ಮಾಡದಿದ್ದರು, ಬೆಂಬಲ ಬೆಲೆ ನೀಡಿದರೆ ರೈತರು ಸಾಲ ತೀರಿಸುತ್ತಾರೆ ಎಂಬ ಸತ್ಯವನ್ನು ದರ್ಶನ್ ಹೇಳಿದ್ದಾರೆ. ಆದರೆ ಈ ಹೇಳಿಕೆ ಕೇವಲ ವೇದಿಕೆ ಮೇಲೆ ನಿಂತು ಮಾತನಾಡುವುದಕ್ಕಷ್ಟೇ ಸೀಮಿತವಾಗಬಾರದು. ದರ್ಶನ್ ಹೇಗೆ ಸುಮಲತಾ ಪರ ನಿರಂತರವಾಗಿ ಚುನಾವಣಾ ಪ್ರಚಾರ ಮಾಡಿದ್ರೋ, ಅದೇ ರೀತಿ ರೈತರಿಗೆ ಬೆಂಬಲ ಬೆಲೆ ಕೊಡಿಸುವ ನಿಟ್ಟಿನಲ್ಲಿ ರೈತರನ್ನು ಸಂಘಟಿಸಿ ಹೋರಾಟ ರೂಪಿಸಬೇಕಿದೆ. ಅವರಿಗೆ ನಮ್ಮ ಬೆಂಬಲ ಇರಲಿದೆ ಎಂದು ಮಂಡ್ಯದ ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ರೈತ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಶಂಬೂನಹಳ್ಳಿ ಸುರೇಶ್, ನಾವೆಲ್ಲ ಬೆಂಬಲ ಬೆಲೆ ವಿಚಾರವಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದು ದರ್ಶನ್ ಹೇಳಿಕೆಯನ್ನು ಸ್ವಾಗತಿಸುತ್ತೇವೆ. ಸ್ವಾಮಿನಾಥನ್ ವರದಿ ಜಾರಿಗೆ ತರಲು ನಾವುಗಳು ಹೋರಾಟ ಮಾಡುತ್ತಿದ್ದು ಈ ಬಗ್ಗೆ ದರ್ಶನ್ ಅವರಿಗೂ ತಿಳಿಸುತ್ತೇವೆ. ಅವರು ನಮ್ಮ ಪರ ಹೋರಾಟಕ್ಕೆ ಬಂದರೆ ಸ್ವಾಗತ ಎಂದು ತಿಳಿಸಿದರು. ಇದನ್ನು ಓದಿ: ಸಾಲಮನ್ನಾ ಆಗದೇ ಇದ್ರೆ ಬೆಂಬಲ ಬೆಲೆ ನೀಡಿ – ಸರ್ಕಾರಕ್ಕೆ ನಟ ದರ್ಶನ್ ಸವಾಲು