ಬೆಂಗಳೂರು: ನಟ ಲೂಸ್ ಮಾದ ಯೋಗಿ ಅವರು ತಮ್ಮ ಮಗಳ ನಾಮಕರಣವನ್ನು ಸರಳವಾಗಿ ಆಚರಿಸಿದ್ದಾರೆ. ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಯೋಗಿ ದಂಪತಿಗೆ ಶುಭಕೋರಿದ್ದಾರೆ.
ಯೋಗಿ ಅವರು ತಮ್ಮ ಮಗಳಿಗೆ ‘ಶ್ರೀನಿಕಾ’ ಎಂದು ನಾಮಕರಣ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದರ್ಶನ್, ಯೋಗಿ ಹಾಗೂ ಅವರ ಪತ್ನಿ ಸಾಹಿತ್ಯಗೆ ಶುಭಾಶಯ ತಿಳಿಸಿದ್ದಾರೆ. ಸದ್ಯ ಈ ಸಮಾರಂಭಕ್ಕೆ ಯೋಗಿ ತಮ್ಮ ಕುಟುಂಬದ ಆಪ್ತರು ಹಾಗೂ ಗೆಳೆಯರಿಗೆ ಮಾತ್ರ ಆಹ್ವಾನ ನೀಡಿದ್ದರು.
ಮೇ 5ರಂದು ಸುಮಾರು ಬೆಳಗ್ಗೆ 5 ಗಂಟೆಗೆ ಸಾಹಿತ್ಯ ಅವರು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮದರ್ ವುಡ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗು ಹುಟ್ಟಿದ ವೇಳೆ ಯೋಗೀಶ್ ಕುಟುಂಬದವರು ತಮ್ಮ ಮನೆಗೆ ಯುವರಾಣಿ ಬಂದಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸಿದ್ದರು. ಅಲ್ಲದೆ ಯೋಗಿ ತಮ್ಮ ಮುದ್ದು ಮಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಖುಷಿ ಪಟ್ಟಿದ್ದರು.
ಯೋಗಿ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅವರನ್ನು ಕುಟುಂಬದ ಸಮ್ಮುಖದಲ್ಲಿ 2017 ನವೆಂಬರ್ 2ರಂದು ಮದುವೆಯಾಗಿದ್ದರು. ಸಾಹಿತ್ಯ ಅವರು ಐಟಿ ಉದ್ಯೋಗಿಯಾಗಿದ್ದು, ಯೋಗಿ ಅವರು ಬಾಲ್ಯದ ಗೆಳತಿಯಾಗಿದ್ದಾರೆ. ಇವರಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿರುವ ವಿಚಾರವನ್ನು ಪೋಷಕರಿಗೆ ತಿಳಿಸಿ, ಕುಟುಂಬಸ್ಥರ ಒಪ್ಪಿಗೆ ಪಡೆದುಕೊಂಡು ಎಲ್ಲರ ಸಮ್ಮುಖದಲ್ಲಿ ಮದುವೆ ಆಗಿದ್ದರು.
ಯೋಗಿ ಅವರು ವಿಜಯ್‍ಪ್ರಸಾದ್ ನಿರ್ದೇಶನದ `ಪರಿಮಳ ಲಾಡ್ಜ್’, ದಯಾಳ್ ಪದ್ಮನಾಭನ್ ಅವರ `ಒಂಬತ್ತನೇ ದಿಕ್ಕು’ ಸೇರಿದಂತೆ `ಲಂಕೆ’, `ಕಂಸ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ತಮಿಳಿನ ಖ್ಯಾತ ನಿರ್ದೇಶಕ ಸಮುದ್ರಕಣಿ ಅವರೊಂದಿಗೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ.