ಚುನಾವಣಾ ಅಕ್ರಮ ಆರೋಪ ಹಿನ್ನೆಲೆ ಕಾಂಗ್ರೆಸ್ ಪ್ರತಿಭಟನೆ; ರಾಹುಲ್ ಗಾಂಧಿಗೆ ಸರಣಿ ಪ್ರಶ್ನೆ ಕೇಳಿದ ಛಲವಾದಿ ನಾರಾಯಣಸ್ವಾಮಿ

Public TV
3 Min Read
Chalavadi narayanaswamy

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ (Election Commission) ಮೇಲೆ ಮತಗಳ್ಳತನ ಆರೋಪ ಮಾಡಿರುವ ರಾಹುಲ್ ಗಾಂಧಿ, ಆ.5 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ರಾಹುಲ್ ಗಾಂಧಿ (Rahul Gandhi) ಆರೋಪ ಮತ್ತು ಪ್ರತಿಭಟನೆ ಈಗ ಬಿಜೆಪಿಯ ವಿರೋಧಕ್ಕೆ ಕಾರಣವಾಗಿದೆ.

ಪ್ರತಿಭಟನೆಗಾಗಿ ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮನ ಹಿನ್ನೆಲೆಯಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಹುಲ್ ಗಾಂಧಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇದನ್ನೂ ಓದಿ: ತೇಜಸ್ವಿ ಯಾದವ್ ಆರೋಪ ಸುಳ್ಳು – ಕರಡು ಮತದಾರರ ಪಟ್ಟಿಯಲ್ಲಿ ಹೆಸರಿದೆ: ಚುನಾವಣಾ ಆಯೋಗ ಸ್ಪಷ್ಟನೆ

Rahul Gandhi 4

ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಕಪಟ ನಾಟಕದ ‘ಸೂತ್ರದಾರ’ರಿದ್ದಾರೆ, ಅವರಿಂದ ಪ್ರೇರೇಪಿತರಾದ ನೀವು ‘ಪಾತ್ರದಾರಿ’ಯಾಗಿ ಕರ್ನಾಟಕಕ್ಕೆ ಬರುತ್ತಿದ್ದೀರಿ. ಇಲ್ಲಿಗೆ ಆಗಮಿಸುತ್ತಿರುವ ನಿಮಗೆ ಸ್ವಾಗತ ಕೋರುತ್ತೇನೆ. ದಯವಿಟ್ಟು ನನ್ನ ಈ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ, ನಂತರ ನೈತಿಕತೆ ಬೋಧಿಸುವ ಔದಾರ್ಯ ತೋರಿಸಿ. ನೀವು ಈ ಪ್ರಶ್ನೆಗಳಿಗೆ ಉತ್ತರ ನೀಡದೇ ಪ್ರತಿಭಟನೆ ನಡೆಸಿದರೆ, ನೀವು ಕಾಂಗ್ರೆಸ್ ಪಕ್ಷದ ನಾಯಕರಾಗಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಮುಂದುವರೆಯುವ ಯೋಗ್ಯತೆ ನಿಮ್ಮಲ್ಲಿಲ್ಲ ಎಂಬ ಸಂದೇಶವೇ ಪ್ರಧಾನವಾಗುತ್ತದೆ ಎಂದು ಛಲವಾದಿ ಪೋಸ್ಟ್ ಹಾಕಿದ್ದಾರೆ.

ಇತಿಹಾಸವನ್ನು ನೀವು ಮರೆಯಬೇಡಿ ಎಂದಿರುವ ಅವರು ರಾಹುಲ್ ಗಾಂಧಿಗೆ 13 ಪ್ರಶ್ನೆಗಳನ್ನು ಕೇಳಿದ್ದಾರೆ. ಇದನ್ನೂ ಓದಿ: ಚುನಾವಣಾ ಆಯೋಗ ಸಂಪೂರ್ಣ ಸತ್ತು ಹೋಗಿದ್ದು, ತನ್ನ ಸ್ವಾಯತ್ತತೆ ಕಳೆದುಕೊಂಡಿದೆ: ರಾಹುಲ್ ಗಾಂಧಿ

ರಾಹುಲ್ ಗಾಂಧಿಗೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಗಳೇನು?
* ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಹಲವು ಚುನಾವಣೆಗಳಲ್ಲಿ ಸೋಲಿಸಲು ಕಾಂಗ್ರೆಸ್ ಪಕ್ಷ ಮತಗಳ್ಳತನ ಮಾಡಲಿಲ್ಲವೇ?
* ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಸೋಲಿಸಲು ಕಾಂಗ್ರೆಸ್ ತೆಗೆದುಕೊಂಡ ನೈತಿಕ ಕಾರಣಗಳೇನು?
* ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷವು ನೀಡಿದ ನಿರಂತರ ಅವಮಾನಗಳ ಹಿಂದಿರುವ ನಿಮ್ಮ ನಿಜವಾದ ನಿಲುವೇನು?
* 1975 ರಲ್ಲಿ ನಿಮ್ಮ ಅಜ್ಜಿ ಇಂದಿರಾ ಗಾಂಧಿಯವರು ನ್ಯಾಯಾಲಯದ ತೀರ್ಪಿನ ಪ್ರಕಾರ ಅನರ್ಹರಾಗಲು ಕಾರಣಗಳೇನು? ಅನರ್ಹರಾಗದಂತೆ ನಡೆಸಿದ ಕಾನೂನು ಬದಲಾವಣೆಗಳು ಹಾಗೂ ತುರ್ತು ಪರಿಸ್ಥಿತಿ ಘೋಷಣೆಯ ಹಿಂದಿನ ಕಾರಣಗಳೇನು?
* 1946 ರ ತಾತ್ಕಾಲಿಕ ಸರ್ಕಾರದ ಪ್ರಧಾನ ಮಂತ್ರಿ ಆಯ್ಕೆಯ ಸಂದರ್ಭದಲ್ಲಿ ಮಾನ್ಯ ನೆಹರೂ ಅವರಿಗೆ ಬೆಂಬಲ ಇರದಿದ್ದರೂ, ಅವರಿಗೆ ಅಧಿಕಾರ ಹೇಗೆ ಸಿಕ್ಕಿತು? ನೆಹರೂ ಅವರು ಶೂನ್ಯ ಮತಗಳನ್ನು ಪಡೆದಾಗಲೂ ಪ್ರಧಾನಿಯಾಗಲು ಆಗುವುದನ್ನು ಮತಗಳ್ಳತನವೆಂದರೆ ತಪ್ಪೆನಿಸುತ್ತದೆಯೇ?
* ನೀವು ಹೇಳುವಂತೆ ಪ್ರಧಾನಿ ನರೇಂದ್ರ ಮೋದಿಯವರು ಮತಗಳ್ಳತನ ಮಾಡಿದ್ದರೆ, ನೀವು ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ಕುಳಿತುಕೊಳ್ಳುವ ಅವಕಾಶ ಸಿಗುತ್ತಿತ್ತೇ?
* ಕರ್ನಾಟಕದಲ್ಲಿ ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಮೀಸಲಾಗಿದ್ದ SCSP-TSP ಯೋಜನೆಯ 39,000 ಕೋಟಿ ಹಣವನ್ನು ರಾಜ್ಯ ಸರ್ಕಾರ ಕಳ್ಳತನ ಮಾಡಿದೆ. ಇದರ ವಿರುದ್ಧ ಯಾವಾಗ ಹೋರಾಟ ಮಾಡುತ್ತೀರಿ? ಕರ್ನಾಟಕದಲ್ಲಿ ಆಗಿರುವುದು ಮತಗಳ್ಳತನ ಅಲ್ಲ, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಕಳ್ಳತನ ಆಗಿದೆ. ನಿಮ್ಮ ಹೋರಾಟ ದಲಿತರಿಗೆ ನ್ಯಾಯ ಕೊಡಿಸಲಿಕ್ಕೆ ಇರಬೇಕೇ ಹೊರತು, ಅನ್ಯಾಯದ ಪರವಾಗಿ ಅಲ್ಲ.
* ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣದ ಬಗ್ಗೆ ನೀವು ಯಾವಾಗ ಪ್ರತಿಭಟನೆ ಮಾಡುತ್ತೀರಿ?
* ಮೈಸೂರು MUDA ದಲ್ಲಿ 14 ನಿವೇಶನ ಕಳ್ಳತನವಾಗಿತ್ತು, ನಂತರ ‘ಕಳ್ಳನಲ್ಲ’ ಎಂದು ವಾಪಸ್ ನೀಡಿದ ಪ್ರಕರಣದ ವಿರುದ್ಧ ನಿಮ್ಮ ಪ್ರತಿಕ್ರಿಯೆ ಏನು?
* ಎಕರೆಗಟ್ಟಲೆ ಸಿಎ ಸೈಟ್ ಹಗರಣ, ರೈತರ ಆತ್ಮಹತ್ಯೆ, ಬಾಣಂತಿಯರ ಸಾವು, ಅಧಿಕಾರಿಗಳ ಆತ್ಮಹತ್ಯೆ — ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ವಿಫಲತೆಗಳನ್ನು ತೋರಿಸುತ್ತಿಲ್ಲವೆ? ಇವುಗಳ ವಿರುದ್ಧದ ನಿಮ್ಮ ಹೋರಾಟ ಯಾವಾಗ?
* RCB ವಿಜಯೋತ್ಸವದಲ್ಲಿ ಅಮಾಯಕರು ಮೃತಪಟ್ಟಿದ್ದು, ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆಯ ಕಾರಣದಿಂದಾಗಿಯೇ ಅಲ್ಲವೆ?
* ಎಲ್ಲಾ ಇಲಾಖೆಗಳಲ್ಲಿಯೂ ಭ್ರಷ್ಟಾಚಾರ, ಸೀಮಿತ ಸಮುದಾಯಕ್ಕೆ ಒಲವು ತೋರುತ್ತಿರುವ ಓಲೈಕೆ ರಾಜಕಾರಣ, ರಾಜ್ಯದ ಆರ್ಥಿಕ ಸ್ಥಿತಿ ಕುಸಿತ – ಇದರ ವಿರುದ್ಧ ನೀವು ಯಾವಾಗ ಹೋರಾಟ ಮಾಡುತ್ತೀರಿ?
* ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ, ಇದರ ವಿರುದ್ಧ ಯಾವಾಗ ಹೋರಾಟ ಮಾಡುತ್ತೀರಿ?

ಈ ಎಲ್ಲಾ ಪ್ರಶ್ನೆಗಳಿಗೆ ನೈತಿಕ, ಸಾಂವಿಧಾನಿಕ ಉತ್ತರಗಳಿಲ್ಲದೆ ನೀವು ಪ್ರತಿಭಟನೆ ಮಾಡಿದರೆ, ಅದು ನಿಮ್ಮ ರಾಜಕೀಯದ ಕಪಟ ನಾಟಕವೇ ಹೊರತು, ಹೋರಾಟವಲ್ಲ. ನನ್ನ ಈ ಪ್ರಶ್ನೆಗಳಿಗೆ ನೀವು ಸ್ಪಷ್ಟವಾದ ಉತ್ತರಗಳನ್ನು ನೀಡಬೇಕು. ಇಲ್ಲವಾದರೆ, ನೀವು ನಡೆಸುತ್ತಿರುವ ಕಪಟ ನಾಟಕದ ಪ್ರತಿಭಟನೆಗೆ ನೀತಿಭಾರವಿಲ್ಲ. ನೀವು ನಿಜವಾಗಿಯೂ ಹೋರಾಟದ ಮನೋಭಾವ ಹೊಂದಿದ್ದರೆ, ಮೊದಲಿಗೆ ಮೋಸ, ವಂಚನೆ & ಅನ್ಯಾಯವನ್ನೇ ಸಿದ್ಧಾಂತವನ್ನಾಗಿ ಮಾಡಿಕೊಂಡಿರುವ ನಿಮ್ಮ ಕಾಂಗ್ರೆಸ್‌ನ ಒಳಗಣದ ದ್ವಂದ್ವ, ದ್ವಿಮುಖ ನೀತಿ ಮತ್ತು ಇತಿಹಾಸದ ದೋಷಗಳನ್ನು ಎದುರಿಸಿ, ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿ. ನಂತರ ಹೋರಾಟ ನಡೆಸಿ. ನಿಮ್ಮ ಈ ಕಪಟ ಹೋರಾಟದಲ್ಲಿ ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನ ಎದ್ದು ಕಾಣಿಸುತ್ತಿದೆ ಎಂದು ಛಲವಾದಿ ಟೀಕಿಸಿದ್ದಾರೆ.

Share This Article