- ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ
ಬೆಂಗಳೂರು: ರಾಜ್ಯದಲ್ಲಿ ಸರ್ಕಾರ (Government) ನಡೆಸಲು ಕಾಂಗ್ರೆಸ್ ವಿಫಲ ಆಗಿದೆ. ಇದರ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ನಮ್ಮ ಗೃಹ ಇಲಾಖೆ ಸತ್ತು ಹೋಗಿದ್ಯಾ? ಇದೆಂಥಾ ಗುಲಾಮಗಿರಿ ಸರ್ಕಾರ? ಅಂತ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ಕೆಂಡ ಕಾರಿದರು.
ಯಲಹಂಕದ ಕೋಗಿಲು ಲೇಔಟ್‌ನಲ್ಲಿ (Kogilu layout) ಅಕ್ರಮವಾಗಿ ನೆಲೆಸಿದ್ದವರು ರೋಹಿಂಗ್ಯಾಗಳಾಗಿರಬಹುದು ಎಂದು ಬಿಜೆಪಿ (BJP) ಅನುಮಾನ ಪಟ್ಟಿದೆ. ಈ ಸಂಬಂಧ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿದರು.
ಕೋಗಿಲು ಲೇಔಟ್‌ನಲ್ಲಿ ರೋಗಿಂಗ್ಯಾಗಳು ಎಂಬ ಮಾಹಿತಿ ಇದೆ. ಇದರ ಬಗ್ಗೆ ಸರ್ಕಾರ ಪರಿಶೀಲಿಸಬೇಕು ಎಂದು ಆಗ್ರಹಿಸಿದರು. ನಮ್ಮ ರಾಜ್ಯದವರಲ್ಲದ ಪರರಾಜ್ಯದ ಹಾಗೂ ಬಾಂಗ್ಲಾ ಜನರಿಗೆ ಸರ್ಕಾರ ಪುನರ್ವಸತಿ ಕಲ್ಪಿಸುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರ (Congress Government) ಕೇರಳ ಹಾಗೂ ಹೈಕಮಾಂಡ್ ಗುಲಾಮಗಿರಿ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸರ್ಕಾರದಲ್ಲಿ ವ್ಯವಸ್ಥಿತ ಪಿತೂರಿ ನಡೀತಿದೆ. ಕೋಗಿಲು ಲೇಔಟ್‌ನಲ್ಲಿದ್ದವರು ಆ ಜನ ಯಾರು ಎಲ್ಲಿಯವರು ಅಂತ ಸರ್ಕಾರ ಪರಿಶೀಲನೆ ಮಾಡಿದೆಯಾ? ಹೈಕಮಾಂಡ್ ತಾಕೀತು ಮಾಡಿದ್ರು ಅಂತ ಪುನರ್ವಸತಿ ಕೊಡ್ತಿದ್ದಾರೆ. ಇಲ್ಲಿಯವರೆಗೆ ಎಲ್ಲೆಲ್ಲಿ ಈಥರ ತೆರವು ಕಾರ್ಯಾಚರಣೆ ಆಗಿದೆಯೋ ಅವರಿಗೂ ಪುನರ್ವಸತಿ ಕೊಡಿ. ಇಲ್ಲಿಯವರೇ ಅನೇಕ ಜನ ಮನೆಗಳನ್ನ ಈ ಹಿಂದೆ ಕಳೆದುಕೊಂಡಿದ್ದಾರೆ. ಅವರಿಗೂ ಮನೆ ಕೊಡಿ. ಬಾಂಗ್ಲಾದಿಂದ ಬಂದವರಿಗೆ ಮನೆಗಳನ್ನ ಕೊಡ್ತಿದ್ದೀರಿ, ಇದು ಸರಿಯಲ್ಲ ಎಂದು ಒತ್ತಾಯಿಸಿದ್ರು.
ಹೊರ ರಾಜ್ಯ ಹಾಗೂ ಬಾಂಗ್ಲಾದಿಂದ ಬಂದವರಿಗೆ ಮನೆ ಕೊಡ್ತಿದೆ ಈ ಸರ್ಕಾರ. ಮುಖ್ಯವಾಗಿ ಆ ಜನ ಯಾರು ಅಂತ ಸರ್ಕಾರ ಪರಿಶೀಲನೆ ಮಾಡಬೇಕು? ಅಲ್ಲಿದ್ದವರಿಂದ ಹಣ ಪಡೆದು ಸೈಟು ಮಾರಿದ ವಸೀಮ್ ನನ್ನ ಇನ್ನೂ ಯಾಕೆ ಬಂಧಿಸಿಲ್ಲ? ಎಂಥ ಗುಜರಿ ಸರ್ಕಾರ ನಡೆಸ್ತಿದ್ದೀರಿ ನೀವು? ಎಂಥಾ ಗುಲಾಮಗಿರಿ ಸರ್ಕಾರ ಇದು? ನೀವೇ ಅಕ್ರಮ ಅಂತ ಮನೆಗಳನ್ನ ಒಡೆಸ್ತೀರಿ, ನೀವೇ ಪುನರ್ವಸತಿ ಕೊಡ್ತೀರಿ ಅಂತ ಆಕ್ರೋಶ ಹೊರಹಾಕಿದ್ರು.
ಇನ್ನು ಈ ಪ್ರಕರಣದ ತನಿಖೆ ಎನ್‌ಐಎಗೆ ಕೊಡಬೇಕು. ಇದರ ತನಿಖೆ ಆಗಬೇಕು, ಆ ಜನರ ಪರಿಶೀಲನೆ ಆಗಬೇಕು. ಹಾಗಾಗಿ ಎನ್‌ಐಎ ತನಿಖೆ ಆಗಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಡಿಕೆಶಿ ಕೂಡ ಠುಸ್
ಮುಂದುವರಿದು… ಡಿಕೆಶಿ ಅವರು ಬಹಳ ತಾಕತ್ತಿನ ಮನುಷ್ಯ ಅನ್ಕೊಂಡಿದ್ದೆ. ಆದ್ರೆ ಡಿಕೆಶಿ ಠುಸ್ ಪಟಾಕಿ ಆಗಿಹೋದ್ರು. ಆವತ್ತು ಪಿಣರಾಯಿ ವಿಜಯನ್ ಮಾತು ವಿರೋಧಿಸಿ ಮಾತಾಡಿದ್ರಿ, ಈಗ್ಯಾಕೆ ವೇಣುಗೋಪಾಲ್ ಮಾತಿಗೆ ಮೆತ್ತಗಾದ್ರಿ? ನೀವು ಪಿಣರಾಯಿಗೆ ಹೆದರಿದ್ರೋ? ವೇಣುಗೋಪಾಲ್‌ಗೆ ಹೆದರಿದ್ರೋ? ಆವತ್ತು ಕಾನೂನು ಪ್ರಕಾರ ತೆರವು ಅಂದವರು ಈಗ ಯಾಕೆ ಅಲ್ಲಿಗೆ ಡಿಕೆಶಿ ಭೇಟಿ ಕೊಡ್ತಿದ್ದಾರೆ? ಸರ್ಕಾರ ಇಷ್ಟ ಬಂದಂಗೆ ನಡೆದುಕೊಳ್ಳಲು ನಾವು ಬಿಡಲ್ಲ. ಸರ್ಕಾರ ನಡೆಸಲು ಕಾಂಗ್ರೆಸ್ ವಿಫಲ ಆಗಿದೆ, ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ರು.

