ಬೆಂಗಳೂರು: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರನ್ನು ಉದ್ದೇಶಿಸಿ ನಾನು ಅಂಕಣ ಬರೆದಿಲ್ಲ. ಐದು ಆರು ಬಾರಿ ಗೆದ್ದು ಯಾವುದೇ ಅಭಿವೃದ್ಧಿ ಮಾಡದ ಕರ್ನಾಟಕದ ಎಲ್ಲ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಈ ಅಂಕಣವನ್ನು ನಾನು ಬರೆದಿದ್ದೇನೆ ಎಂದು ವಾಗ್ಮಿ, ಖ್ಯಾತ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
‘ಐದಾರು ಬಾರಿ ಗೆದ್ದರೂ ಐದು ಪೈಸೆ ಉಪಯೋಗವಿಲ್ಲ’ ಎನ್ನುವ ಶೀರ್ಷಿಕೆ ಅಡಿ ಚಕ್ರವರ್ತಿ ಸೂಲಿಬೆಲೆ ಅವರು ಪತ್ರಿಕೆಯೊಂದಕ್ಕೆ ಬುಧವಾರ ಅಂಕಣ ಬರೆದಿದ್ದರು. ಈ ಅಂಕಣದಲ್ಲಿ ಉತ್ತರ ಕರ್ನಾಟಕ ಪ್ರವಾಸೋದ್ಯಮದಲ್ಲಿ ಹಿಂದೆ ಉಳಿದಿದೆ ಯಾಕೆ ಸೇರಿದಂತೆ ಕರ್ನಾಟಕ ಪ್ರವಾಸದ್ಯೋಮ ಕ್ಷೇತ್ರ ಅಭಿವೃದ್ಧಿ ಯಾಕೆ ಆಗಿಲ್ಲ ಎನ್ನುವ ವಿಚಾರಗಳನ್ನು ಪ್ರಸ್ತಾಪ ಮಾಡಿ ಬರೆದಿದ್ದರು. ಈ ಅಂಕಣವನ್ನು ಅನಂತ್ ಕುಮಾರ್ ಹೆಗ್ಡೆ ಉದ್ದೇಶಿಸಿ ಬರೆಯಲಾಗಿದೆ ಎಂದು ಹೆಗ್ಡೆ ಅಭಿಮಾನಿಗಳು ಆರೋಪಿಸಿ ಸೂಲಿಬೆಲೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡುವ ವೇಳೆ ಅವರು ಈ ಮೇಲಿನಂತೆ ಹೇಳಿಕೆ ನೀಡಿದ್ದಾರೆ.
Advertisement
Advertisement
ಅನಂತಕುಮಾರ್ ಹೆಗಡೆಗೆ ಸಂಬಂಧಿಸಿ ನಾನು ಈ ಅಂಕಣ ಬರೆದಿಲ್ಲ. ಐದು ಆರು ಬಾರಿ ಗೆದ್ದ ಎಲ್ಲ ಜನಪ್ರತಿನಿಧಿಗಳಿಗೂ ಅನ್ವಯಿಸುತ್ತದೆ. ಇದು ಕರ್ನಾಟಕ ಅಭಿವೃದ್ಧಿ ಕುರಿತಂತೆ ಕಳೆದ 6 ವರ್ಷಗಳಿಂದ ನಾವು ನೋಡಿದ್ದೇವೆ. 10 ವರ್ಷಗಳಿಂದ ಇಡೀ ರಾಜ್ಯದ ಬೆಳವಣೆಗೆ ಚಟುವಟಿಕೆಯನ್ನು ನೋಡಿದ್ದೇವೆ. 10 ವರ್ಷಗಳಿಂದ ಹಲವು ಸಿಎಂ ಬಂದು ಹೋಗಿದ್ದಾರೆ. ಇದೆಲ್ಲವನ್ನೂ ನೋಡಿ ನೋಡಿ ನನಗೆ ಮಾತ್ರವಲ್ಲ ಅಭಿವೃದ್ಧಿ ಬಯಸುವ ಪ್ರತಿಯೊಬ್ಬರಿಗೂ ಅಸಮಾಧಾನವಾಗಿದೆ ಎಂದು ತಿಳಿಸಿದರು.
Advertisement
ಉತ್ತರ ಕನ್ನಡವನ್ನು ನೋಡಿದರೇ ಇಂದಿಗೂ ನನಗೆ ನೋವಾಗುತ್ತದೆ. ಅಭಿವೃದ್ಧಿ ಮಾಡದ, ವಿಕಾಸವಾದ ಇಲ್ಲದವರಿಗೆ ಗೌರವ ಕೊಡಲು ಸಾಧ್ಯವಿಲ್ಲ. ವಿಕಾಸವನ್ನು ಬಿಟ್ಟು ಎಲ್ಲವನ್ನೂ ಮಾತನಾಡುತ್ತಾರೆ. ನಾನು ಬರೆದ ಅಂಕಣದಿಂದ ಹೆಗ್ಡೆ ಅವರ ಅಭಿಮಾನಿಗಳು ಕೆರಳಿದ್ರೆ ಕೆರಳಲಿ ನನಗೆ ಸಂತೋಷ. ಈ ಮೂಲಕವಾದರೂ ಉತ್ತರ ಕನ್ನಡ ಅಭಿವೃದ್ಧಿಯಾಗಲಿ ಎಂದರು.
Advertisement
ನೀರಿರುವ ಬಾವಿಯಲ್ಲಿ ನೀರು ಸೇದಿ ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ಸಚಿವ ಸ್ಥಾನ ಕೊಟ್ಟಿದ್ದಲ್ಲ. ನೀರು, ಸಂಪತ್ತನ್ನು ಸೃಷ್ಟಿಸಿಕೊಳ್ಳಲು ನರೇಂದ್ರ ಮೋದಿ ಅವರು ಸಚಿವ ಸ್ಥಾನ ಕೊಟ್ಟಿದ್ದಾರೆ. ನನಗೆ ಇತ್ತೀಚೆಗೆ ರಾಜಕೀಯ ನಾಯಕರ ಮೇಲೆ ನಿರೀಕ್ಷೆ ಕಳೆದು ಹೋಗಿದೆ. ಐದೈದು ಬಾರಿ ಶಾಸಕರಾಗಿ, ಸಂಸದರಾಗಿ ಆಯ್ಕೆಯಾದವರ ಕ್ಷೇತ್ರಗಳಿಗೆ ನಾನು ಹೋಗಿ ನೋಡಿದ್ದೇನೆ. ಬಹಳ ಬೇಸರವಾಗುತ್ತದೆ. ಜನರು ಯಾಕೆ ಇವರನ್ನು ಪ್ರತಿ ಬಾರಿ ವೋಟು ನೀಡಿ ಗೆಲ್ಲಿಸಬೇಕು? ಅಭಿವೃದ್ಧಿ, ವಿಕಾಸ ಮಾಡದೇ ಇರುವರಿಗೆ ಗೌರವ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಸೂಲಿಬೆಲೆ ಬೇಸರ ವ್ಯಕ್ತಪಡಿಸಿದರು.
ನಾನು ನಿರಂತರವಾಗಿ ನಾನು ಗ್ರಾಮೀಣ ಅಭಿವೃದ್ಧಿ, ಹಣಕಾಸು ವಿಚಾರ, ಮದ್ಯ ನಿಷೇಧದ ಬಗ್ಗೆ ಬರೆದಿದ್ದೇನೆ. ಆದರೂ ಯಾವುದು ಬೆಳವಣಿಗೆ ಆಗಿಲ್ಲ. ಇತ್ತೀಚಿಗೆ ಟೂರಿಸಂ ಅಭಿವೃದ್ಧಿ ಬಗ್ಗೆ ಬರೆದಿದ್ದೇನೆ. ಇದು ಅಗತ್ಯವಾದ ಸಂಗತಿಯಾಗಿದೆ. ಉತ್ತರ ಕನ್ನಡದಲ್ಲಿ ಗೆದ್ದು ಬಂದ ಸಂಸದ, ಶಾಸಕರ ನಿರ್ಲಕ್ಷ್ಯದಿಂದಾಗಿ ಪ್ರವಾಸೋದ್ಯಮ ಇನ್ನೂ ಅಭಿವೃದ್ಧಿಯಾಗಿಲ್ಲ. ಈ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಬರೆದಿದ್ದೇನೆ. ಬರೀ ಅನಂತಕುಮಾರ್ ಹೆಗಡೆ ಒಬ್ಬರ ಬಗ್ಗೆ ಮಾತ್ರ ನಾನು ಹೇಳಿದ್ದಲ್ಲ. ಅಲ್ಲಿ ಆಯ್ಕೆ ಆಗಿರುವ ಎಲ್ಲ ರಾಜಕೀಯ ನಾಯಕರಿಗೆ ಇದು ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದರು.
ಚುನಾವಣೆಯ ಸಂದರ್ಭದಲ್ಲಿ ಧರ್ಮ ಜಾತಿ ನೆಪವಾಗುತ್ತದೆ. ವಿಕಾಸದ ಬಗ್ಗೆ ಮಾತನಾಡುವುದಕ್ಕೆ ಬದಲು ಧರ್ಮದ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು. ನಾನು ನಾಗರಿಕನಾಗಿ ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಕರ್ನಾಟಕದ ಅಭಿವೃದ್ಧಿಗೋಸ್ಕರ ನನ್ನ ಕೊಡುಗೆ ಎಷ್ಟು ಕೊಡಲು ಆಗುತ್ತದೋ ಅಷ್ಟನ್ನು ನೀಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
https://www.youtube.com/watch?v=W443FWFfOAk
https://www.youtube.com/watch?v=Ph2IOPiR9vQ