ಬೆಂಗಳೂರು: ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ, ನಾವು ಕಾಳಿಯನ್ನು ಪೂಜೆ ಮಾಡುವವರು ಸಾವಿಗೆ ಹೆದರಲ್ಲ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಮೇಲೆ ಕೊಲೆಯ ರೂಪಿಸಿದ ಸಂಚು ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಆರೋಪಿಗಳ ಎಲ್ಲಾ ಪ್ರಯತ್ನ ಕೂಡ ಶೇಕಡ 100ರಷ್ಟು ವ್ಯರ್ಥ ಪ್ರಯತ್ನ. ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ. ಕಾಳಿಯನ್ನು ಅಂದರೆ ಮೃತ್ಯು ದೇವತೆಯನ್ನು ಪೂಜೆ ಮಾಡಿ ಬಂದು ಕುಳಿತ ನಮಗೆ ಮೃತ್ಯವಿನ ಹೆದರಿಕೆ ಖಂಡಿತವಾಗಿಯೂ ಇಲ್ಲ. ಈ ರಾಷ್ಟ್ರವನ್ನು ಕಟ್ಟುವಂತ ಕೆಲಸವನ್ನು ನಾವು ಮಾಡುತ್ತೇವೆ. ಅವರು ಏನೇ ಮಾಡಿದರೂ ಬಗ್ಗುವ ಜೀವ ನಮ್ಮದಲ್ಲ ಎಂದು ಆರೋಪಿಗಳಿಗೆ ಹೇಳಲು ನಾನು ಇಚ್ಛಿಸುತ್ತೇನೆ ಅಂತ ಪ್ರತಿಕ್ರಯಿಸಿದರು.
Advertisement
Advertisement
ಸಿಎಎ ಪರ ಜನಜಾಗೃತಿ ವೇಳೆ ದೊಡ್ಡ ಗಾತ್ರದ ಕಲ್ಲು ಬಂದು ನನ್ನ ಮೇಲೆ ಬಿತ್ತು. ಇಷ್ಟೆಲ್ಲ ಜನರ ನಡುವೆ ಗುರಿಯಿಟ್ಟು ನನಗೆ ಹೊಡೆಯಲು ಅವರಿಗೆ ಸಾಧ್ಯವಾಯ್ತಲ್ಲ ಎನ್ನುವುದೇ ಆಶ್ಚರ್ಯಕರ ಸಂಗತಿ. ನನ್ನ ಪ್ರಕಾರ ಆರೋಪಿಗಳು ಮೊದಲೇ ತಯಾರಿ ನಡೆಸಿಕೊಂಡು ಬಂದಿದ್ದರು. ಆದರೆ ಅಂದು ನನಗೆ ಏನೂ ಮಾಡಲು ಆಗಲಿಲ್ಲ ಎಂದು ಕಲ್ಲು ಹೊಡೆದಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರಿಗೆ ತಿಳಿಸಿದ್ದೆ. ಅವರು ನನಗೆ ಸಹಕರಿಸಿ ನನ್ನ ಮನೆ, ಕಚೇರಿಗೆ ಭದ್ರತೆ ಒದಗಿಸಿದ್ದರು. ಅವರಿಗೆ ಧನ್ಯವಾದ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
Advertisement
Advertisement
ಕೊಲ್ಲಬೇಕೆನ್ನುವ ಮಾನಸಿಕತೆ ಇರುವುದು ಕ್ರಿಮಿನಲ್ ಸಂಗತಿ. ಇಂತಹ ಮನಸ್ಥಿತಿ ಇರುವವರನ್ನು ನಿಷೇಧಿಸುವುದು ಖಂಡಿತವಾಗಿಯು ಅಗತ್ಯವಾಗಿದೆ. ಅವರನ್ನು ಇಲ್ಲಿ ಬೀಡುಬಿಡಲು ಅವಕಾಶ ನೀಡಬಾರದು. ಕರ್ನಾಟಕ ತುಂಬಾ ಶಾಂತಿಯುತವಾದ ಸುಂದರ ಜಾಗ. ಯಾವುದಕ್ಕೂ ನಾವು ನಮ್ಮ ರಾಜ್ಯವನ್ನು ಕ್ರಿಮಿನಲ್ ಮನಸ್ಥಿತಿ ಇರುವವರ ನಾಡಾಗಲು ಬಿಡಬಾರದು. ಕಳೆದ ಮೂರ್ನಾಲ್ಕು ದಿನಗಳಿಂದ ನಾನು ವರದಿಗಳನ್ನು ನೋಡುತ್ತಿದ್ದೇನೆ. ಈ ರೀತಿ ಕೃತ್ಯಗಳಿಗೆ ಮೈಸೂರು, ಮಂಗಳೂರು, ಉಡುಪಿ ಹೀಗೆ ರಾಜ್ಯದ ಹಲವು ನಗರಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ. ಈ ಹೊಸ ಸರ್ಕಾರ ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಅವರನ್ನು ಮಟ್ಟಹಾಕಬೇಕು. ಯಾವುದೇ ಕಾರಣಕ್ಕೂ ಅವರನ್ನು ಇಲ್ಲಿ ಬೀಡುಬಿಡಲು ಅವಕಾಶ ನೀಡಬಾರದು ಎಂದು ಸೂಲಿಬೆಲೆ ಸರ್ಕಾರಕ್ಕೆ ಮನವಿ ಮಾಡಿದರು.
ಇದು ಕೊಲೆಯ ಮಾನಸಿಕತೆ. ಪ್ರತಿಭಟನೆ ಎನ್ನುವುದು ಕೇವಲ ಪ್ರತಿಭಟನೆ ಅಷ್ಟೇ. ಆದರೆ ಅದನ್ನು ಕೊಲೆ ಮಾಡುವ ಮಟ್ಟಕ್ಕೆ ತೆಗೆದುಕೊಂಡು ಹೋಗೋದು ಒಂದು ಕೆಟ್ಟ ಪ್ರಯತ್ನ, ಹುಚ್ಚುತನ. ಈ ರೀತಿ ಪ್ರಯತ್ನವನ್ನು ಬುಡದಿಂದಲೇ ಚಿವುಟಿ ಹಾಕಬೇಕು. ನನ್ನ ಪ್ರಕಾರ ದೇಶವನ್ನು ತುಂಡರಿಸಿ ಆದರೂ ಅಧಿಕಾರ ಪಡೆಯಬೇಕು ಎಂದು ಆಲೋಚಿಸುವವರು ನೀಚರು. ಅಧಿಕಾರಕ್ಕಾಗಿ ಈ ರೀತಿ ಕೊಲೆ ಯತ್ನಕ್ಕೆ ಪ್ರಯತ್ನಿಸುವವರು ಕೊಲೆ ಮಾಡುವವರಿಗಿಂತ ನೀಚರು. ಈ ರೀತಿ ನೀಚ ಪ್ರಯತ್ನ ಮಾಡಬಾರದಿತ್ತು. ಆದರೆ ಇನ್ನಾದರೂ ಇವರೆಲ್ಲ ತಿದ್ದುಕೊಂಡು ರಾಷ್ಟ್ರದ ಕುರಿತು ಕೆಲಸ ಮಾಡಲು ಮುಂದಾದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಾನು ಘಟನೆ ನಡೆದ ದಿನ ಸುಮಾರು 10:30ರ ಹೊತ್ತಿಗೆ ಟೌನ್‍ಹಾಲ್‍ಗೆ ಬಂದೆ. ಆದರೆ ಅಲ್ಲಿನ ಮೆಟ್ಟಿಲ ಬಳಿ ಹೋಗದೇ ನೆರೆದಿದ್ದ ಜನರ ನಡುವೆ ಕುಳಿತೆ. ನಾನು ಅಲ್ಲಿ ಕುಳಿತ 10ರಿಂದ 15 ನಿಮಿಷ ಆಸುಪಾಸಿಗೆ ನನ್ನ ಮೇಲೆ ಕಲ್ಲು ಬಿತ್ತು. ಸುಮಾರು 50 ಅಡಿ ಅಂತರದಿಂದ ಕಲ್ಲು ಬಿದ್ದಿತ್ತು. ಆರೋಪಿಗಳು ನಮ್ಮವರ ನಡುವೆ ಇದ್ದುಕೊಂಡು ಪ್ಲಾನ್ ಮಾಡಿ ಈ ರೀತಿ ಮಾಡಿದ್ದಾರೆ. ಆದರೆ ಕೊಲ್ಲುವವರಿಗಿಂತ ಕಾಯುವವನು ದೊಡ್ಡವನು. ಇಂತಹ ನೂರಾರು ಎಸ್‍ಡಿಪಿಐ(ಸೊಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ)ಗಳನ್ನ ಭಾರತ ನೋಡಿದೆ. ಅವರನ್ನೆಲ್ಲಾ ಮೆಟ್ಟಿ ನಿಲ್ಲುವ ಶಕ್ತಿ ಭಾರತಕ್ಕಿದೆ ಎಂದು ಸೂಲಿಬೆಲೆ ಹೇಳಿದರು.