ಬೆಂಗಳೂರು: ಎ.ವಿ. ಚಿಂತನ್. ಸಹೃದಯಿ ಸಿನಿಮಾ ವಲಯದಲ್ಲಿ, ಸಿನೆಮಾಗಳನ್ನು ಸೀರಿಯಸ್ಸಾಗಿ ಪರಿಗಣಿಸಿದವರ ನಡುವೆ ಚಿಂತನ್ ಎಂಬ ಹೆಸರು ಕೇಳಿದರೇನೆ ಎಲ್ಲರ ಮುಖದಲ್ಲೂ ಸಂತಸ ಮನೆ ಮಾಡುತ್ತದೆ. ಎಲ್ಲೇ ಆದರೂ ‘ಚಿಂತನ್ ಥರಾ ವ್ಯಕ್ತಿ ಮತ್ತೊಬ್ಬರಿಲ್ಲ…’ ಅನ್ನೋ ಏಕಮೇವ ಅಭಿಪ್ರಾಯವೇ ಮನೆಮಾಡಿದೆ. ಒಂದು ಕಾಲಕ್ಕೆ ಯಾವುದೇ ಸ್ಟಾರ್ ಸಿನಿಮಾಗಳು ಚಿತ್ರೀಕರಣಕ್ಕೆ ಹೋಗೋ ಮುಂಚೆ `ಒಂದು ಸಲ ಚಿಂತನ್‍ಗೆ ಕತೆ ಹೇಳಿ ಒಪೀನಿಯನ್ ತಗೆದುಕೊಳ್ಳಬೇಕು. ಏನೇ ಯಡವಟ್ಟುಗಳಿದ್ದರೂ ನೇರವಾಗಿ ಹೇಳಿ, ಒಳ್ಳೋ ಸಜೆಷನ್ಸ್ ಕೊಡ್ತಾರೆ…’ ಅನ್ನೋ ಮಾತಿತ್ತು. `ನವಗ್ರಹ’, `ಸಾರಥಿ’ಯಿಂದ ಹಿಡಿದು ಚಕ್ರವರ್ತಿಯ ತನಕ ದರ್ಶನ್ ಅವರ ಬಹುತೇಕ ಸಿನಿಮಾಗಳಿಗೆ ಸಂಭಾಷಣೆ ಬರೆದವರು ಚಿಂತನ್. ದರ್ಶನ್ ಸಿನಿಮಾ ಅಂದರೆ ಅದಕ್ಕೆ ಚಿಂತನ್ ಅವರೇ ಮಾತುಗಳನ್ನು ಹೊಸೆಯಬೇಕು ಅನ್ನುವಷ್ಟರ ಮಟ್ಟಿಗೆ ಇವರಿಬ್ಬರ ಕಾಂಬಿನೇಷನ್ ಹೆಸರು ಮಾಡಿದೆ.
ಬಿಡುಗಡೆಗೆ ಮುಂಚೆಯೇ ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದರಿಂದಲೋ ಏನೋ `ಚಕ್ರವರ್ತಿ’ ಬಿಡುಗಡೆಯ ನಂತರ ಅಂತಾ ಸೌಂಡು ಮಾಡಲು ಸಾಧ್ಯವಾಗಲಿಲ್ಲ. ಆದರೆ ಮೊನ್ನೆ ಈ ಚಿತ್ರದ ಹಿಂದಿ ಡಬ್ಬಿಂಗ್ ವರ್ಷನ್ನು ಬಿಡುಗಡೆಯಾಗಿ ಒಂದು ಕೋಟಿಗೂ ಅಧಿಕ ಜನ ವೀಕ್ಷಿಸಿದ್ದಾರೆ. ಒಂದು ಸಿನಿಮಾ ಬಿಡುಗಡೆಯಾಗಿ ವರ್ಷ ಕಳೆದ ನಂತರವೂ ಈ ರೀತಿಯಲ್ಲಿ ಸೌಂಡು ಮಾಡುತ್ತಿದೆ ಅನ್ನೋದು ನಿಜಕ್ಕೂ ಮೆಚ್ಚಬೇಕಾದ ವಿಚಾರ. ಕನ್ನಡ ಸಿನಿಮಾವೊಂದು ಹಿಂದಿಯಲ್ಲಿ ಡಬ್ ಆಗಿ ಇಷ್ಟು ಮಟ್ಟಕ್ಕೆ ಟಾಕ್ ಕ್ರಿಯೇಟ್ ಮಾಡಿರೋದು ಕನ್ನಡಿಗರ ಪಾಲಿಗೆ ಅಪಾರ ಖುಷಿಯ ಸಂಗತಿಯೂ ಹೌದು.
Advertisement
Advertisement
ಹಾಗೆ ನೋಡಿದರೆ ದರ್ಶನ್ ಅವರ, ಅದರಲ್ಲೂ ಅದೂ ಆ ಮಟ್ಟಿಗೆ ಸಂಚಲನ ಸೃಷ್ಟಿಸಿದ ಸಿನಿಮಾವನ್ನು ನಿರ್ದೇಶಿಸಿದ ಬೇರೆ ಯಾರೇ ನಿರ್ದೇಶಕರಾಗಿದ್ದರೂ ಅಗತ್ಯಕ್ಕಿಂತಾ ಹೆಚ್ಚೇ ಪಬ್ಲಿಸಿಟಿ ಪಡೆಯುತ್ತಿದ್ದರು. ಆ ಮೂಲಕ ಒಂದಷ್ಟು ಸಿನಿಮಾಗಳನ್ನು ಒಂದರ ಹಿಂದೆ ಒಂದರಂತೆ ಮಾಡಿ ಮುಗಿಸುತ್ತಿದ್ದರು. ಆದರೆ ಚಿಂತನ್ ಮೊದಲಿನಿಂದಲೂ ಹೆಸರಿಗಾಗಿ ತಹತಹಿಸುವವರಲ್ಲ. ಎಲೆಮರೆಕಾಯಿಯಂತೆ ಕೆಲಸ ಮಾಡೋದರಲ್ಲೇ ಹೆಚ್ಚು ಖುಷಿ ಪಡುವ ವ್ಯಕ್ತಿ.
Advertisement
ದರ್ಶನ್ ಅವರಂಥಾ ವ್ಯಕ್ತಿತ್ವಕ್ಕೆ ಹೊಂದುವ ಮಾತುಗಳನ್ನು ಸೃಷ್ಟಿಸಿ, ಚಿತ್ರಕತೆಗಳನ್ನು ಬರೆದು ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ ಚಿಂತನ್ ಚಕ್ರವರ್ತಿಯ ನಂತರ ಏನು ಮಾಡುತ್ತಿದ್ದಾರೆ? ಎಲ್ಲಿ ಹೋದರು ಅನ್ನೋ ಪ್ರಶ್ನೆ ಹುಟ್ಟೋದು ಸಹಜ. ಸಿನಿಮಾ ವಿಚಾರದಲ್ಲಿ ಚಿಂತನ್ ನಿಜಕ್ಕೂ ಹುಲಿ ಇದ್ದಂತೆ. `ಹುಲಿ ಸೈಲೆಂಟಾಗಿದೆ ಅಂದ್ರೆ ಭೇಟೆಯ ತಯಾರಿ ಜೋರಾಗೇ ಇದೆ’ ಅಂತಾ ಅಂದುಕೊಳ್ಳಬಹುದೇನೋ. ಒಂದೊಳ್ಳೆ ಸಿನಿಮಾದ ಮೂಲಕ ಚಿಂತನ್ ದೊಡ್ಡ ಮಟ್ಟದಲ್ಲಿ ಘರ್ಜಿಸಲಿ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv