ಬೆಂಗಳೂರು: ಎಲ್ಲ ಸರಿಯಾಗಿದ್ದಿದ್ದರೆ ಮುಂದಿನ ತಿಂಗಳು ನಮ್ಮಿಬ್ಬರ ನಿಶ್ಚಿತಾರ್ಥವಾಗುತ್ತಿತ್ತು. ಆದರೆ ನನ್ನ ಹಣೆಯ ಬರಹ ಏನೂ ಮಾಡಲು ಆಗುವುದಿಲ್ಲ ಎಂದು ಮಧುಮಗ ವೆಂಕಟೇಶ್ ಭಾವುಕರಾಗಿದ್ದಾರೆ.
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚೈತನ್ಯ ಇಂದು ಮೃತಪಟ್ಟಿದ್ದಾರೆ. ಚೈತನ್ಯ ಅವರಿಗೆ ಏಪ್ರಿಲ್ 10ರಂದು ವೆಂಕಟೇಶ್ ಜೊತೆ ನಿಶ್ಚಿತಾರ್ಥ ನೆರವೇರಬೇಕಾಗಿತ್ತು. ಆದರೆ ನಿಶಿತಾರ್ಥದ ಸಂಭ್ರಮದಲ್ಲಿದ್ದ ಮಧುಮಗ ವೆಂಕಟೇಶ್‍ಗೆ ಚೈತನ್ಯ ಸಾವು ಬರಸಿಡಿಲು ಬಡಿದಂತಾಗಿದೆ.
ಘಟನೆ ಕುರಿತಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವೆಂಕಟೇಶ್, ಚೈತನ್ಯ ಅವರು ಅತ್ತೆ ಮಗಳ ಮದುವೆ ಇದ್ದಿದ್ದರಿಂದ ಬಟ್ಟೆ ಖರೀದಿಸಲು ಹೋಗಿದ್ದರು. ಈ ವೇಳೆ ಅವಘಢ ಸಂಭವಿಸಿದೆ. ಇನ್ನೇನು ಮುಂದಿನ ತಿಂಗಳು 10 ರಂದು ನನ್ನ ಹಾಗೂ ಚೈತನ್ಯ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಆದರೆ ಬುಧವಾರ ಟ್ರಾನ್ಸ್ ಫಾರ್ಮರ್ ಬಳಿ ಒಂದು ಸಣ್ಣ ಹಳ್ಳ ಇತ್ತು. ಈ ವೇಳೆ ಬೈಕ್‍ನನ್ನು ಸ್ಲೋ ಮಾಡಿದಾಗ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿ ಇಬ್ಬರು ಗಾಯಗೊಂಡಿದ್ದರು. ಇದನ್ನೂ ಓದಿ: ಟ್ರಾನ್ಸ್ ಫಾರ್ಮರ್ ಸ್ಫೋಟ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೇ ಯುವತಿಯೂ ಸಾವು
ಕೆಇಬಿ ಅವರು ಸರಿಯಾದ ಸಮಯಕ್ಕೆ ಟ್ರಾನ್ಸ್ ಫಾರ್ಮರ್ ರೆಡಿ ಮಾಡಿರಲಿಲ್ಲ. ಹೀಗಾಗಿ ಇವರು ಬರುವ ವೇಳೆಗೆ ಸರಿಯಾಗಿ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡಿದೆ. ಎಲ್ಲ ಸರಿಯಾಗಿದ್ದಿದ್ದರೆ, ಮುಂದಿನ ತಿಂಗಳು ನಮ್ಮಿಬ್ಬರ ನಿಶ್ಚಿತಾರ್ಥವಾಗುತ್ತಿತ್ತು. ಆದರೆ ನನ್ನ ಹಣೆಯ ಬರಹ ಏನೂ ಮಾಡಲು ಆಗುವುದಿಲ್ಲ ಕಣ್ಣಿರು ಹಾಕಿದ್ದಾರೆ. ಇದನ್ನೂ ಓದಿ: ಟ್ರಾನ್ಸ್ ಫಾರ್ಮರ್ ಸ್ಫೋಟ ತಂದೆ ಸಾವು – ಮಗಳ ಸ್ಥಿತಿ ಗಂಭೀರ
ಮದುವೆ ಕಾರ್ಯಕ್ರಮವಿದ್ದ ಕಾರಣ ಬಟ್ಟೆ ಖರೀದಿಗೆ ಮಗಳೊಂದಿಗೆ ಉಲ್ಲಾಳ ಉಪನಗರಕ್ಕೆ ಬಂದು ಬಟ್ಟೆ ಖರೀದಿ ಮಾಡಿಕೊಂಡು ಅಪ್ಪ-ಮಗಳು ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಮಂಗನಹಳ್ಳಿ ಬ್ರಿಡ್ಜ್ ಬಳಿ ಸಡನ್ ಆಗಿ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ಭಸ್ಮವಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ತಂದೆ ಶಿವರಾಜು, ಮಗಳು ಚೈತನ್ಯರನ್ನು ಸ್ಥಳೀಯರು ಕೂಡಲೇ ವಿಕ್ಟೋರಿಯಾ ಆಸ್ಪತ್ರೆ ರವಾನಿಸಿದ್ದರು. ಆದರೆ ಶಿವರಾಜು ನಿನ್ನೆಯೇ ಆಸ್ಪತ್ರೆಯಲ್ಲಿ ಮೃತಪಟ್ಟರೆ, ತಡರಾತ್ರಿ 2:15ರ ಸುಮಾರಿಗೆ ಚೈತನ್ಯ(19) ಕೂಡ ಸಾವನ್ನಪ್ಪಿದ್ದಾರೆ.