ಬೆಂಗಳೂರು: ಸಾಮಾನ್ಯವಾಗಿ ಸರಗಳ್ಳರು ತಮ್ಮ ಕೃತ್ಯವನ್ನ ಎಸಗಲು ನಿರ್ಜನ ಪ್ರದೇಶವನ್ನ ಆರಿಸಿಕೊಳುತ್ತಾರೆ. ಆದರೆ ಇಲ್ಲೊಬ್ಬ ಕಳ್ಳನಿಗೆ ಅದ್ಯಾವ ಭಂಡ ಧೈರ್ಯವೋ ಗೊತ್ತಿಲ್ಲ. ಜನರ ಮುಂದೆಯೇ ಕೈಚಳಕ ತೋರಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.
ಎಂಜಿ ರಸ್ತೆಯಲ್ಲಿ ನೂರಾರು ಜನರ ಮುಂದೆಯೇ ಸರಗಳ್ಳ ತನ್ನ ಕೈಚಳಕ ತೋರಿಸಲು ಯತ್ನಿಸಿದ್ದು, ಭಾನುವಾರ ಸಂಜೆ 7.30ರ ಸಮಯದಲ್ಲಿ ಸವಿತಾ ಎಂಬವರು ಮಕ್ಕಳನ್ನು ಆಡಿಸುತ್ತಿದ್ದ ವೇಳೆ ಮೊಹಮ್ಮದ್ ದಸ್ತಗೀರ್ ಎಂಬಾತ ಮಹಿಳೆ ಕೈಗೆ ಡ್ರ್ಯಾಗರ್‍ನಿಂದ ಇರಿದು ಸರ ಕಿತ್ತು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಈ ವೇಳೆ ಸ್ಥಳದಲ್ಲಿ ಇದ್ದ ರೆವೆನ್ಯೂ ಇಲಾಖೆಯ ಗನ್ ಮ್ಯಾನ್ ರವೀಂದ್ರ ಎಂಬವರು ಕಳ್ಳನನ್ನ ಬೆನ್ನತ್ತಿದ್ದಾರೆ. ಆಗ ಮೊಹಮ್ಮದ್, ಗನ್ ಮ್ಯಾನ್ ಗೂ ಡ್ರ್ಯಾಗರ್ ನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಇದನ್ನು ಕಂಡ ಸ್ಥಳೀಯರು ಮೊಹಮ್ಮದ್ ನನ್ನು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿದ ಕೇಂದ್ರ ವಿಭಾಗದ ಡಿಸಿಪಿ ಡಾ. ಚಂದ್ರಗುಪ್ತ ಅವರು, ಸವಿತಾರ ಮೇಲೆ ದಾಳಿ ನಡೆಸುವ ಮುನ್ನ ಮೊಹಮ್ಮದ್ ಅದೇ ದಾರಿಯಲ್ಲಿ ಬರುತ್ತಿದ್ದ ಮತ್ತೊಬ್ಬ ಮಹಿಳೆಯ ಸರ ಕೀಳಲು ಹೋಗಿ ವಿಫಲನಾಗಿದ್ದ. ಆರೋಪಿಯ ಮೇಲೆ 20 ಸರಗಳ್ಳತನ ಪ್ರಕರಣಗಳಿದ್ದು, ಈ ಹಿಂದೆ ಪೊಲೀಸರಿಂದ ಗುಂಡೇಟು ತಿಂದಿದ್ದ ಎಂದು ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.