ಸಿಇಟಿ 16,004 ಎಂಜಿನಿಯರಿಂಗ್, ಆರ್ಕಿಟೆಕ್ಚರ್ ಸೀಟು ಉಳಿಕೆ: ಕೆಇಎ

Public TV
1 Min Read

ಬೆಂಗಳೂರು: ಯುಜಿಸಿಇಟಿ ಎರಡನೇ ಮುಂದುವರಿದ ಸುತ್ತಿನ ಪ್ರವೇಶ ಪ್ರಕ್ರಿಯೆ ನಂತರ ಒಟ್ಟು‌ 16,004 ಸೀಟುಗಳು ಭರ್ತಿಯಾಗದೆ ಉಳಿದಿದ್ದು ಇಷ್ಟೂ ಸೀಟುಗಳ ವಿವರಗಳನ್ನು (ಕಾಲೇಜು ಮತ್ತು ಕೋರ್ಸ್‌ವಾರು) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಸರ್ಕಾರ ಮತ್ತು ಕರ್ನಾಟಕ ಅನುದಾನ ರಹಿತ ಎಂಜಿನಿಯರಿಂಗ್ (Engineering) ಕಾಲೇಜುಗಳ ಸಂಘದ ನಡುವಿನ ಒಪ್ಪಂದದ ಪ್ರಕಾರ ಪ್ರವೇಶ ಪ್ರಕ್ರಿಯೆ ನಂತರ ಬಾಕಿ ಉಳಿದ ಸೀಟುಗಳನ್ನು ಕಾಲೇಜುಗಳಿಗೆ ಬಿಟ್ಟು ಕೊಡಬೇಕು. ಆ ಪ್ರಕಾರ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಹಾಗೆಯೇ ಸರ್ಕಾರಕ್ಕೂ ಈ ಬಗ್ಗೆ ಪತ್ರದ ಮೂಲಕ ತಿಳಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಎಂಜಿನಿಯರಿಂಗ್‌ನ ವಿವಿಧ ವಿಭಾಗಗಳಲ್ಲಿ 13,089 ಸೀಟು ಬಾಕಿ ಉಳಿದಿವೆ. ಆರ್ಕಿಟೆಕ್ಚರ್ (Architecture) ಕೋರ್ಸ್‌ನಲ್ಲಿ 569 ಸೀಟು ಭರ್ತಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಒಟ್ಟು 2,208 ಮಂದಿಗೆ ವಿವಿಧ ಕಾಲೇಜುಗಳಲ್ಲಿ ಸೀಟು ಹಂಚಿಕೆಯಾಗಿದ್ದರೂ ಶುಲ್ಕ ಪಾವತಿಸಿಲ್ಲ. 95 ಮಂದಿ ಶುಲ್ಕ ಪಾವತಿಸಿದ್ದರೂ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ಹೋಗಿಲ್ಲ. 45 ಮಂದಿ ಅಲ್ಪಸ್ವಲ್ಪ ಶುಲ್ಕ ಪಾವತಿಸಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

Share This Article