ನ್ಯೂಯಾರ್ಕ್: ಮೈಕ್ರೋಸಾಫ್ಟ್ ಕಂಪನಿ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ, ಶೀಘ್ರದಲ್ಲೇ ಸಂಬಳ ಹೆಚ್ಚಳವಾಗಲಿದೆ. ಈ ಸುದ್ದಿಯನ್ನು ಕಂಪನಿಯ ಸಿಇಒ ಸತ್ಯ ನಾಡೆಲ್ಲಾ ಖಚಿತಪಡಿಸಿದ್ದಾರೆ.
ಮೈಕ್ರೋಸಾಫ್ಟ್ ಕಂಪನಿಯು ತಮ್ಮ ಜಾಗತಿಕ ಅರ್ಹತೆಯ ಬಜೆಟ್ ಅನ್ನು ಸುಮಾರು ದ್ವಿಗುಣಗೊಳಿಸಿದೆ. ಪ್ರಪಂಚದಾದ್ಯಂತದ ದೊಡ್ಡ ಟೆಕ್ ಕಂಪನಿಗಳು ಉನ್ನತ ಪ್ರತಿಭೆಗಳನ್ನು ಉಳಿಸಿಕೊಳ್ಳುವ ಹಿನ್ನೆಲೆ ತಮ್ಮ ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸುತ್ತಿದೆ.
ಉದ್ಯೋಗಿಗಳಿಗೆ ಮೇಲ್ ಮಾಡಿರುವ ಸತ್ಯಾ ನಾಡೆಲ್ಲಾ, ನಮ್ಮ ಗ್ರಾಹಕರು ಮತ್ತು ಪಾಲುದಾರರನ್ನು ಸಶಕ್ತಗೊಳಿಸಲು ನೀವು ಮಾಡುವ ಅದ್ಭುತ ಕೆಲಸದಿಂದಾಗಿ ನಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ನಿಮ್ಮ ಪ್ರಭಾವದಿಂದ ನಾವು ದೊಡ್ಡದಾಗಿ ಬೆಳೆದಿದ್ದೇವೆ. ನಮ್ಮ ಕಂಪನಿಯು ಪ್ರಪಂಚದಾದ್ಯಂತ ಆಳವಾಗಿ ಮೆಚ್ಚುಗೆ ಪಡೆದಿದೆ. ಅದಕ್ಕಾಗಿ ನಾನು ನಿಮಗೆ ದೊಡ್ಡ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಉದ್ಯೋಗಿಗಳ ವೇತನವನ್ನು ಕೇವಲ ಮೈಕ್ರೋಸಾಫ್ಟ್ ಕಂಪನಿ ಮಾತ್ರ ಹೆಚ್ಚಿಸಿಲ್ಲ. ಈ ಹಿಂದೆ ಫೆಬ್ರವರಿಯಲ್ಲಿ ಅಮೆಜಾನ್ ಕಂಪನಿಯು ಸಹಿತ ಕಾರ್ಪೊರೇಟ್ ಮತ್ತು ಟೆಕ್ ಉದ್ಯೋಗಿಗಳಿಗೆ ಕ್ರಮವಾಗಿ 3,50,000 ಡಾಲರ್, 1,60,000 ಡಾಲರ್ ವರೆಗೆ ಗರಿಷ್ಠ ಮೂಲ ವೇತನವನ್ನು ಏರಿಸಿತ್ತು.
ಜನವರಿಯಲ್ಲಿ, ಗೂಗಲ್ ತನ್ನ ನಾಲ್ವರು ಉನ್ನತ ಕಾರ್ಯನಿರ್ವಾಹಕರ ಸಂಬಳವನ್ನು ಹೆಚ್ಚಿಸಿತ್ತು. ಅವರ ಮೂಲ ವೇತನವನ್ನು 6,50,000 ಡಾಲರ್‌ನಿಂದ 10 ಲಕ್ಷ ಡಾಲರ್‌ವರೆಗೆ ಏರಿಸಿತ್ತು.