ಚಿತ್ರದುರ್ಗ: ಬಯಲು ಬಹಿರ್ದೆಸೆ ಮುಕ್ತ ಮಾಡಬೇಕೆಂದು ರಾಜ್ಯ ಸರ್ಕಾರ ಕನಸು ಕಂಡಿದೆ. ಎಲ್ಲಾ ಕಡೆ ಇದು ಪರಿಣಾಮಕಾರಿಯಾಗಿ ಜಾರಿಗೆ ಬರ್ತಿಲ್ಲ. ಆದರೆ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಿಇಒ ರವೀಂದ್ರ ಅವರು ಈ ಅಭಿಯಾನದಲ್ಲಿ ಯಶಸ್ವಿಯಾಗಿಸಿ ಇಂದು ಪಬ್ಲಿಕ್ ಹೀರೋ ಆಗಿದ್ದಾರೆ.
ಹೌದು, ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಿಇಓ ರವೀಂದ್ರ ಅವರು ತಮಟೆ ಬಾರಿಸಿಕೊಂಡು ಮೆರವಣಿಗೆ ಹೊರಟು ಮಹಿಳೆಯರಿಗೆ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸಿ, ಸರ್ಕಾರ ಕಂಡ ಬಯಲು ಬಹಿರ್ದೆಸೆ ಮುಕ್ತ ರಾಜ್ಯದ ಕನಸನ್ನು ನನಸಾಗುವ ಹಾದಿಯಲ್ಲಿ ಸಾಗುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯನ್ನು ಹಿಂದುಳಿದ ಬರದನಾಡು ಎಂದು ಕರೆಯುತ್ತಾರೆ. ಇಲ್ಲಿನ ಬಹುತೇಕರು ಶೈಕ್ಷಣಿಕವಾಗಿ ಅಭಿವೃದ್ಧಿ ಕಾಣದೇ ಬಯಲು ಬರ್ಹಿದೆಸೆಗೆ ಹೋಗುತ್ತಾರೆ. ಇದರಿಂದಾಗಿ ಹಲವು ಬಾರಿ ವನ್ಯ ಮೃಗಗಳಾದ ಆನೆ, ಕರಡಿ ಹಾಗು ಹಾವಿನ ದಾಳಿಗೆ ಸಿಲುಕಿ ಅನೇಕರು ಬಲಿಯಾಗಿದ್ದಾರೆ.
ಇದನ್ನು ಮನಗೊಂಡ ಚಿತ್ರದುರ್ಗ ಜಿಲ್ಲಾಪಂಚಾಯ್ತಿ ಸಿಈಓ ಪಿ.ಎನ್.ರವಿಂದ್ರ ಈ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಪಣತೊಟ್ಟಿದ್ದೂ, ಗೃಹ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನರಲ್ಲಿ ವಿಭಿನ್ನವಾಗಿ ಜಾಗೃತಿ ಮೂಡಿಸೋ ಮೂಲಕ ಜನಮನ್ನಣೆ ಗಳಿಸಿದ್ದಾರೆ.
ರವೀಂದ್ರ ಅವರು ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವ ಅಭಿಯಾನ ಆರಂಭಿಸಿ ‘ನಮ್ಮ ನಡಿಗೆ ಶೌಚಾಲಯ ನಿರ್ಮಾಣದ ಕಡೆಗೆ’ ಅನ್ನೋ ವಿಶೇಷ ಅಭಿಯಾನ ನಡೆಸುತ್ತಿದ್ದಾರೆ. ನಿತ್ಯವೂ ಬೆಳ್ಳಂಬೆಳಿಗ್ಗೆ ಒಂದೊಂದು ಗ್ರಾಮಪಂಚಾಯ್ತಿಗೆ ಭೇಟಿ ನೀಡಿ ಜಾಗೃತಿ ಮೂಡಿಸ್ತಿದ್ದಾರೆ. ಸ್ಥಳದಲ್ಲೇ ಸರ್ಕಾರದ ಅನುದಾನ ಬಿಡುಗಡೆ ಮಾಡುವ ವ್ಯವಸ್ಥೆಗೆ ನಾಂದಿ ಹಾಡಿದ್ದಾರೆ.
ಜಿಲ್ಲೆಯಲ್ಲಿ ಈ ಅಭಿಯಾನ ಬಹುತೇಕ ಯಶಸ್ವಿಯಾಗಿದೆ. ಬಹುತೇಕ ಮಂದಿ ಗೃಹ ಶೌಚಾಲಯದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅಲ್ಲದೆ ಈ ಪ್ರಯೋಗದ ಫಲವಾಗಿ, 90% ಬದಲಾವಣೆ ಕೂಡ ಆಗಿದೆ. ಬಯಲು ಬಹಿರ್ದೆಸೆಯಿಂದಾಗುವ ಸಾಂಕ್ರಾಮಿಕ ರೋಗಬಾಧೆ ಕುರಿತು ಜಾಗೃತಿಯನ್ನು ಮೂಡಿಸ್ತಿರೋ ರವೀಂದ್ರ ಅವರು, ವನ್ಯಜೀವಿಗಳಿಂದ ಪ್ರಾಣಕ್ಕೆ ಬರ್ತಿದ್ದ ಸಂಚಕಾರವನ್ನೂ ದೂರ ಮಾಡಿಸಿದ್ದಾರೆ.
ಒಟ್ಟಾರೆ ಕೆಲವು ಮೂಡನಂಬಿಕೆಗಳು ಮತ್ತು ಸರ್ಕಾರ ಅನುದಾನ ಸರಿಯಾಗಿ ಅರ್ಹ ಫಲಾನುಭವಿಗಳಿಗೆ ತಲುಪದ ಕಾರಣದಿಂದಾಗಿ ಇಲ್ಲಿನ ಬಹುತೇಕ ಗ್ರಾಮಗಳ ಗ್ರಾಮಸ್ಥರು ಬಯಲು ಬಹಿರ್ದೆಸೆಗೆ ತೆರಳುತ್ತಿದ್ದರು. ಆದ್ರೆ ವಿಶೇಷ ಶೈಲಿಯಲ್ಲಿ ಅವರ ಮನ ಗೆದ್ದು, ಗೃಹ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವಂತೆ ಪ್ರೇರೆಪಿಸಿ, ಚಿತ್ರದುರ್ಗ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಟ್ಟಿರೋ ಚಿತ್ರದುರ್ಗ ಜಿಲ್ಲಾ ಪಂಚಾಯತಿ ಸಿಇಓ ರವೀಂದ್ರ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv