ನವದೆಹಲಿ: ಬಡವರಿಗೆ ಕಡಿಮೆ ದರದಲ್ಲಿ ಆಹಾರಧಾನ್ಯವನ್ನು ದೇಶದ ಎಲ್ಲಾ ಕಡೆ ಪೂರೈಸುವ ನಿಟ್ಟಿನಲ್ಲಿ “ಒಂದು ದೇಶ, ಒಂದು ರೇಷನ್ ಕಾರ್ಡ್” ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರ ಆಹಾರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಅಧ್ಯಕ್ಷತೆಯಲ್ಲಿ ರಾಜ್ಯ ಆಹಾರ ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದ ಬಡ ಜನರು ಉದ್ಯೋಗ ಅಥವಾ ಇತರ ಕಾರಣಕ್ಕೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋದಾಗ ಆಹಾರಕ್ಕೆ ಸಮಸ್ಯೆ ಆಗದೇ ಇರಲು ಈ ಬದಲಾವಣೆ ಮಾಡಲಾಗಿದೆ.
- Advertisement -
- Advertisement -
ಈ ಯೋಜನೆಯಿಂದ ಒಬ್ಬ ವ್ಯಕ್ತಿ ಅಥವಾ ಕುಟುಂಬ ವಿವಿಧ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರೇಶನ್ ಕಾರ್ಡ್‍ಗಳನ್ನು ಹೊಂದಿದ್ದರೆ ತಡೆಯಬಹುದು. ಈ ನಿಯಮದಿಂದ ಸರ್ಕಾರದ ಬೊಕ್ಕಸಕ್ಕೂ ಉಳಿತಾಯವಾಗುತ್ತದೆ. ಅಷ್ಟೇ ಅಲ್ಲದೇ ಪಿಡಿಎಸ್ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಲು ನೆರವಾಗಲಿದೆ.
- Advertisement -
ಸಚಿವ ರಾಮ್‍ವಿಲಾಸ್ ಪಾಸ್ವಾನ್ ಮಾತನಾಡಿ, ಇದರಿಂದ ವಲಸೆ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅವರಿಗೆ ಪೂರ್ಣ ಆಹಾರ ಭದ್ರತೆ ದೊರೆಯಲಿದೆ. ಈ ರೀತಿಯ ಕಾರ್ಮಿಕರು ಯಾವುದೇ ನಿರ್ಧಿಷ್ಟ ಪಡಿತರ ಅಂಗಡಿಯಿಂದ ಆಹಾರ ಧಾನ್ಯಗಳನ್ನು ಖರೀದಿಸಬೇಕಾಗಿಲ್ಲ. ಬದಲಾಗಿ ತಮಗೆ ಸಮೀಪದ ಯಾವುದೇ ಪಡಿತರ ಅಂಗಡಿಯಿಂದಲೂ ಖರೀದಿಸಬಹುದಾಗಿದೆ. ಇದರ ಜೊತೆಗೆ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.
- Advertisement -
ಈ ಯೋಜನೆಯನ್ನು ಜಾರಿ ಮಾಡಲು ಕೇಂದ್ರ ಆಹಾರ ಸಚಿವಾಲಯ ದೇಶದ ಎಲ್ಲ ರೇಷನ್ ಕಾರ್ಡ್‍ಗಳನ್ನು ಒಂದೇ ವ್ಯವಸ್ಥೆಯಡಿಗೆ ತರಲಿದೆ. ಕೇಂದ್ರ ಸರ್ಕಾರ ಇದಕ್ಕಾಗಿ ಇಂಟಿಗ್ರೇಡೆಸ್ ಮ್ಯಾನೇಜ್‍ಮೆಂಟ್ ಆಫ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಂ (ಐಎಂಪಿಡಿಎಸ್) ಮೂಲಕ ಆನ್‍ಲೈನ್ ಡೇಟಾಬೇಸ್ ಮಾಡಲು ಸಿದ್ಧತೆ ನಡೆಸಿದೆ.
ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ಗುಜರಾತ್, ಹರ್ಯಾಣ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ಮತ್ತು ತ್ರಿಪುರಾದಲ್ಲಿ ಈಗಾಗಲೇ ಐಎಂಪಿಡಿಎಸ್ ಜಾರಿಯಲ್ಲಿದೆ. ಈ ರಾಜ್ಯಗಳ ಫಲಾನುಭವಿಗಳು ತಮ್ಮ ಜಿಲ್ಲೆಯ ಯಾವುದೇ ಪಡಿತರ ಅಂಗಡಿಗಳಿಂದ ಆಹಾರ ಧಾನ್ಯ ಖರೀದಿಸಬಹುದಾಗಿದೆ.