ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಹೆಸರನ್ನು ದಿ ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಎಂಬುದಾಗಿ ಮರುನಾಮಕರಣ ಮಾಡಿದ್ದು ಈ ಚಳಿಗಾಲದ ಅಧಿವೇಶನದಲ್ಲೇ ಮಸೂದೆ ಮಂಡನೆ ಮಾಡಲಿದೆ.
ದಿ ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಸಂಕ್ಷಿಪ್ತವಾಗಿ VB G RAM G ಎಂದು ಕರೆಯಲಾಗುತ್ತದೆ.
ಹೊಸ ಮಸೂದೆಯು ವಿಕ್ಷಿತ್ ಭಾರತ್ 2047 (Viksit Bharat 2047) ದೃಷ್ಟಿಕೋನವನ್ನು ಪೂರೈಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಇದನ್ನೂ ಓದಿ: ಬೆಳಗ್ಗೆವರೆಗೆ ಪಟ್ಟ ಸಿಗುತ್ತೆ ಅನ್ನೋದು ಗೊತ್ತೇ ಇರಲಿಲ್ಲ – ಬಿಜೆಪಿ ಕಾರ್ಯಾಧ್ಯಕ್ಷ ನಿತಿನ್ ನಬಿನ್ ಯಾರು?
2005 ರಲ್ಲಿ ಆಗಿನ ಯುಪಿಎ ಸರ್ಕಾರವು (UPA) ಪ್ರಾರಂಭಿಸಿದ MGNREGA ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಕೆಲಸವನ್ನು ಖಾತರಿಪಡಿಸುತ್ತದೆ. ಹೊಸ ಮಸೂದೆಯಲ್ಲಿ 100 ದಿನಗಳ ಖಾತರಿಯನ್ನು 125 ಕ್ಕೆ ಹೆಚ್ಚಿಸಲಾಗಿದೆ. ಕೆಲಸ ಪೂರ್ಣಗೊಂಡ ಒಂದು ವಾರ ಅಥವಾ 15 ದಿನಗಳಲ್ಲಿ ಪಾವತಿಗಳನ್ನು ಮಾಡಲಾಗುತ್ತದೆ ಎಂಬ ಪ್ರಸ್ತಾಪವಿದೆ. ಗಡುವಿನೊಳಗೆ ಪಾವತಿಗಳನ್ನು ಮಾಡದಿದ್ದರೆ, ನಿರುದ್ಯೋಗ ಭತ್ಯೆಗೆ ಅವಕಾಶವೂ ಇದೆ.
ಹೊಸ ಮಸೂದೆಯು ಯೋಜನೆಯಡಿಯಲ್ಲಿ ಕೆಲಸವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸುತ್ತದೆ – ನೀರಿನ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಮೂಲಸೌಕರ್ಯ ಮತ್ತು ವಿಪತ್ತು ಎಂದು ವಿಂಗಡಿಸಲಾಗಿದೆ.
ಗ್ರಾಮೀಣ ಪ್ರದೇಶದ ನಿವಾಸಿಗಳು ಕೃಷಿ ಋತುವಿನಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯೋಮೆಟ್ರಿಕ್ಸ್ ಮತ್ತು ಜಿಯೋಟ್ಯಾಗಿಂಗ್ ಅನ್ನು ಬಳಸಲಾಗುತ್ತದೆ.
ಜಿ ರಾಮ್ ಜಿ ಯೋಜನೆಯಡಿಯಲ್ಲಿ, ಕೇಂದ್ರ ಮತ್ತು ಹೆಚ್ಚಿನ ರಾಜ್ಯಗಳು 60:40 ಅನುಪಾತದಲ್ಲಿ ವೆಚ್ಚಗಳನ್ನು ಹಂಚಿಕೊಳ್ಳುತ್ತವೆ. ಈ ಅನುಪಾತವು ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ 90:10 ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100 ಪ್ರತಿಶತ ಇರುತ್ತದೆ. ವಾರ್ಷಿಕವಾಗಿ 1.51 ಲಕ್ಷ ಕೋಟಿ ರೂ.ಗಳ ಪ್ರಸ್ತಾವಿತ ವೆಚ್ಚದಲ್ಲಿ ಕೇಂದ್ರವು 95,692 ಕೋಟಿ ರೂ.ಗಳನ್ನು ಒದಗಿಸುತ್ತದೆ.

