– ವಶ, ಬಂಧನದ 30 ದಿನದಲ್ಲಿ ರಾಜೀನಾಮೆ ಕಡ್ಡಾಯ
ನವದೆಹಲಿ: ಕ್ರಿಮಿನಲ್ ಪ್ರಕರಣಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರನ್ನು ತನಿಖಾ ಸಂಸ್ಥೆಗಳು ವಶಕ್ಕೆ ಪಡೆದರೆ ಅಥವಾ ಶಿಕ್ಷೆಗೆ ಬಂಧಿಸಿದರೆ, ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲು ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ (Lok Sabha) ಮಂಡನೆ ಮಾಡಲು ಕೇಂದ್ರ ಸಿದ್ಧತೆ ಮಾಡಿಕೊಂಡಿದೆ.
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕರಡು ಮಸೂದೆಗೆ ಅನುಮೋದನೆ ನೀಡಿದೆ. 1963ರ ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆ ಅನ್ವಯ ಕೇಂದ್ರಾಡಳಿತ ಪ್ರದೇಶದ ಸಿಎಂ, ಸಚಿವರ ವಜಾಕ್ಕೆ ಯಾವುದೇ ಅವಕಾಶ ಇಲ್ಲ. ಅದೇ ರೀತಿ ಪ್ರಧಾನಿ, ಕೇಂದ್ರ ಸಚಿವರ ವಜಾಕ್ಕೂ ಕಾಯ್ದೆಯಲ್ಲಿ ಅವಕಾಶ ಇರದ ಕಾರಣ ಈ ಹಿನ್ನೆಲೆಯಲ್ಲಿ ಹೊಸ ತಿದ್ದುಪಡಿ ಕಾಯ್ದೆ ಮೂಲಕ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಇದನ್ನೂ ಓದಿ: ರಷ್ಯಾ ಮೇಲೆ ಒತ್ತಡ ಹೇರಲು ಭಾರತದ ಮೇಲೆ ಸುಂಕ – ವೈಟ್ ಹೌಸ್
ಪ್ರಧಾನಿ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿ, ಕೇಂದ್ರ ಸಚಿವರು, ರಾಜ್ಯಗಳ ಸಚಿವರನ್ನು ಬಂಧಿಸಿದರೆ, ನಂತರದ 30 ದಿನಗಳ ಒಳಗೆ ಅವರನ್ನು ಹುದ್ದೆಯಿಂದ ತೆಗೆದು ಹಾಕುವ ಮಸೂದೆ ಇದಾಗಿದೆ.
5 ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಗೆ ಒಳಗಾಗುವ ಕ್ರಿಮಿನಲ್ ಅಪರಾಧ ಪ್ರಕರಣಗಳಿಗೆ ಈ ನಿಯಮ ಅನ್ವಯವಾಗಲಿದೆ. ಈಗಿರುವ ನಿಯಮಗಳ ಪ್ರಕಾರ, ಯಾವುದೇ ಜನಪ್ರತಿನಿಧಿ ಕ್ರಿಮಿನಲ್ ಪ್ರಕರಣಗಳಲ್ಲಿ 2 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾದರೆ ಮಾತ್ರವೇ ಜನಪ್ರತಿನಿಧಿ ಸ್ಥಾನ ಕಳೆದುಕೊಳ್ಳುತ್ತಾರೆ. ಅಲ್ಲದೇ ಶಿಕ್ಷೆಯ ಬಳಿಕ ಮತ್ತೆ 5 ವರ್ಷ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಇಲ್ಲ ಎಂದಿದೆ. ಇದನ್ನೂ ಓದಿ: 12 ದಿನಗಳ ಹಿಂದೆ ರೈಲಿನಲ್ಲಿ ನಾಪತ್ತೆಯಾಗಿದ್ದ ಹೈಕೋರ್ಟ್ ತರಬೇತಿ ವಕೀಲೆ ನೇಪಾಳ ಗಡಿಯಲ್ಲಿ ಪತ್ತೆ!
ಸಂಪುಟ ಸಭೆಯಲ್ಲಿ ಈ ಕರಡು ಮಸೂದೆಗೆ ಅನುಮೋದನೆ ಸಿಕ್ಕಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಸಚಿವರಿಗೂ ಹೊಸ ಕಾನೂನು ಅನ್ವಯವಾಗಲಿದೆ. ಈ ಹಿಂದೆಯಿದ್ದ ಕಾನೂನಿನಲ್ಲಿ ಪ್ರಧಾನಿ ಹಾಗೂ ಕೇಂದ್ರ ಸಚಿವರ ವಜಾಕ್ಕೆ ಅವಕಾಶವಿರಲಿಲ್ಲ. ಆದರೆ ಹಾಲಿ ನಿಯಮಗಳ ಪ್ರಕಾರ ಯಾವುದೇ ಸಚಿವರಿಗೆ 2 ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ ಅವರು ಸಚಿವ ಸ್ಥಾನದಿಂದ ವಜಾಗೊಳ್ಳುತ್ತಾರೆ.