ನವದೆಹಲಿ: ರಾಮನವಮಿ ಕಾರ್ಯಕ್ರಮ ಸಂದರ್ಭದಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (JNU)ಕ್ಕೆ ಕೇಂದ್ರ ಶಿಕ್ಷಣ ಸಚಿವಾಲಯ ಸೂಚನೆ ನೀಡಿದೆ.
ರಾಮನವಮಿ ಸಂದರ್ಭದಲ್ಲಿ ವಿದ್ಯಾರ್ಥಿ ಗುಂಪುಗಳ ನಡುವಿನ ಘರ್ಷಣೆ ಮತ್ತು ಕ್ಯಾಂಪಸ್‌ನಲ್ಲಿನ ಅಶಾಂತಿಯ ಬಗ್ಗೆ ಔಪಚಾರಿಕ ವರದಿಯನ್ನು ಕೇಳಲಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಜೆಎನ್‍ಯುನಲ್ಲಿ ಮತ್ತೆ ರಣಾಂಗಣ – ಮಾಂಸಾಹಾರ ವಿಚಾರಕ್ಕೆ ವಿದ್ಯಾರ್ಥಿಗಳ ಮಾರಾಮಾರಿ
ರಾಮನವಮಿಯಂದು ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಮಾಂಸಾಹಾರ ಪೂರೈಕೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಭಾನುವಾರ ವಿಶ್ವವಿದ್ಯಾಲಯದ ಕಾವೇರಿ ಹಾಸ್ಟೆಲ್‌ನಲ್ಲಿ ಘರ್ಷಣೆ ನಡೆದಿತ್ತು. ಹಿಂಸಾಚಾರದಲ್ಲಿ 20 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಆಡಳಿತವು, ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಯಾವುದೇ ರೀತಿಯ ಹಿಂಸಾಚಾರದಲ್ಲಿ ತೊಡಗಿರುವುದು ಕಂಡುಬಂದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ರಾಮನವಮಿ ವೇಳೆ ಹಿಂಸಾಚಾರ ತಡೆಗಟ್ಟುವಲ್ಲಿ ಕರ್ನಾಟಕ ಸರ್ಕಾರ ಸೋತಿದೆ: ಓವೈಸಿ
ಎಬಿವಿಪಿಯ ಸದಸ್ಯರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ), ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಷನ್ (ಡಿಎಸ್‌ಎಫ್) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ) ಸದಸ್ಯರು ಎಬಿವಿಪಿ ವಿರುದ್ಧ ದೂರು ನೀಡಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ ಮನೋಜ್ ಸಿ. ತಿಳಿಸಿದ್ದಾರೆ. ದೂರು ನೀಡುವುದಾಗಿ ಎಬಿವಿಪಿ ಸದಸ್ಯರೂ ಹೇಳಿದ್ದಾರೆ. ಆ ದೂರಿನ ಬಳಿಕ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.