-ಶೀಘ್ರದಲ್ಲೇ ಟಾಯ್ಸ್ ಪಾರ್ಕ್ ನಿರ್ಮಾಣಕ್ಕೆ ಸ್ಥಳ ಗುರುತಿಸುವ ಭರವಸೆ – ನಿತಿನ್ ಗಡ್ಕರಿ
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bengaluru-Mysuru Expressway) ನಿರ್ಮಾಣದ ಬಳಿಕ ಚನ್ನಪಟ್ಟಣಕ್ಕೆ ಬರುತ್ತಿದ್ದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಪ್ರವಾಸಿಗರ ಇಳಿಮುಖದಿಂದಾಗಿ ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಸದ್ಯ ಎಕ್ಸ್‌ಪ್ರೆಸ್ ವೇ ಕಾರಿಡಾರ್‌ನಲ್ಲಿ ಟಾಯ್ಸ್ ಪಾರ್ಕ್ ನಿರ್ಮಾಣದ ಮೂಲಕ ಮತ್ತೆ ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ ಮರುಜೀವ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಚನ್ನಪಟ್ಟಣದ ಬೊಂಬೆಗಳಿಗೆ ಐತಿಹಾಸಿಕ ಹಿನ್ನೆಲೆ ಇದೆ. ಚನ್ನಪಟ್ಟಣ ಬೊಂಬೆಗಳ ನಾಡು ಎಂದೇ ಪ್ರಸಿದ್ಧವಾಗಿದೆ. ಸಾವಿರಾರು ಕುಟುಂಬಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಈ ಬೊಂಬೆ ಉದ್ಯಮದ ಮೇಲೆ ಅವಲಂಬಿತವಾಗಿವೆ. ಆದರೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣದ ನಂತರ ಚನ್ನಪಟ್ಟಣ ನಗರಕ್ಕೆ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ ಈ ಉದ್ಯಮದ ಮೇಲೆ ಅವಲಂಬಿತರಾಗಿರುವವರ ಸ್ಥಿತಿ ಶೋಚನೀಯವಾಗಿದೆ. ಇದೀಗ ಎಕ್ಸ್‌ಪ್ರೆಸ್ ವೇಯಲ್ಲಿ ಟಾಯ್ಸ್ ಪಾರ್ಕ್ ನಿರ್ಮಾಣ ಮಾಡಿ, ಬೊಂಬೆ ಮಾರಾಟಕ್ಕೆ ಅವಕಾಶ ನೀಡುತ್ತಿರುವುದು ಬೊಂಬೆ ಉದ್ಯಮಕ್ಕೆ ಮರುಜೀವ ನೀಡಿದಂತಾಗಿದೆ.ಇದನ್ನೂ ಓದಿ: 2024ರಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ನಿಂದ ಹೊಸ ಮೈಲಿಗಲ್ಲು – 41 ದಶಲಕ್ಷ ಮಂದಿ ಪ್ರಯಾಣ
ಕೊರೊನಾ ಸಮಯದಲ್ಲಿ ಶೇ.50ರಷ್ಟು ನೆಲಕಚ್ಚಿದ್ದ ಬೊಂಬೆ ಉದ್ಯಮ, ಎಕ್ಸ್‌ಪ್ರೆಸ್ ವೇ ಆದ ಬಳಿಕ ಸಂಪೂರ್ಣ ಕುಸಿತ ಕಂಡಿತ್ತು. ಹಳೇ ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾದ ಬಳಿಕ ಬೊಂಬೆ ಉತ್ಪಾದನೆ ಹಾಗೂ ಮಾರಾಟದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಸದ್ಯ ಹಳೇ ಹೆದ್ದಾರಿಯಲ್ಲಿ ಬೊಂಬೆಗಳ ಮಾರಾಟ ಮಾಡಿ, ಜೀವನ ಮಾಡುತ್ತಿರುವ ಬೊಂಬೆ ವರ್ತಕರು, ಗ್ರಾಹಕರಿಲ್ಲದೇ ಬೊಂಬೆ ಅಂಗಡಿಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಇನ್ನೂ ಬೊಂಬೆ ಉದ್ಯಮದ ಪುನಶ್ಚೇತನ ಕುರಿತು ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಸದ ಡಾ. ಸಿ.ಎನ್ ಮಂಜುನಾಥ್ ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿದ್ದರು. ಬೊಂಬೆ ಉದ್ಯಮಿಗಳ ಸ್ಥಿತಿ-ಗತಿ ಕುರಿತು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿ, ಎಕ್ಸ್‌ಪ್ರೆಸ್ ವೇ ಪಕ್ಕದಲ್ಲಿ ಬೊಂಬೆ ಮಾರಾಟಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು. ಸದ್ಯ ಸಂಸದರ ಮನವಿಗೆ ನಿತಿನ್ ಗಡ್ಕರಿ ಸ್ಪಂದಿಸಿದ್ದು, ಶೀಘ್ರದಲ್ಲೇ ಟಾಯ್ಸ್ ಪಾರ್ಕ್ ನಿರ್ಮಾಣಕ್ಕೆ ಗುರುತು ಮಾಡುವ ಭರವಸೆ ನೀಡಿದ್ದಾರೆ. ಚನ್ನಪಟ್ಟಣ ಎಂಟ್ರಿ, ಎಕ್ಸಿಟ್ ಸಮೀಪ ಪುಡ್ ಕೋರ್ಟ್, ರೆಸ್ಟ್ ಏರಿಯಾ ಸೇರಿ ಬೃಹತ್ ಟಾಯ್ಸ್ ಪಾರ್ಕ್ ಶೀಘ್ರದಲ್ಲೇ ಆರಂಭ ಆಗುತ್ತದೆ ಎಂದು ಸಂಸದ ಮಂಜುನಾಥ್ ತಿಳಿಸಿದ್ದಾರೆ.
ಒಟ್ಟಾರೆ ಬೊಂಬೆ ತಯಾರಿಕೆಯ ಮೇಲೆ ಅವಲಂಬಿತರಾಗಿರುವ ಸಾವಿರಾರು ಜನರಿಗೆ ಟಾಯ್ಸ್ ಪಾರ್ಕ್ ನಿರ್ಮಾಣ ಹೊಸ ಹುರುಪನ್ನು ತುಂಬುತ್ತಿದ್ದು, ಬೊಂಬೆಗಳ ನಾಡು ಎಂಬ ಚನ್ನಪಟ್ಟಣದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದಂತಾಗುತ್ತದೆ.ಇದನ್ನೂ ಓದಿ: ರನ್ ಹೊಳೆ ಹರಿಸಿ ಈಡನ್ ಗಾರ್ಡನ್‌ನಲ್ಲಿ ದಾಖಲೆ ಬರೆದ ಲಕ್ನೋ