ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ರಾಜ್ಯ ಸರ್ಕಾರ ಸಮ್ಮತಿಸಿ ಸೂಚಿಸಿದ್ದು, ಇದರಿಂದಾಗಿ ಕೇರಳ ಸರ್ಕಾರದ ಲಾಬಿಗೆ ಸಿಎಂ ಕುಮಾರಸ್ವಾಮಿ, ಸಚಿವ ರೇವಣ್ಣ ಮಣಿದ್ರಾ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ಬಂಡೀಪುರದಲ್ಲಿ ರಾತ್ರಿ 9 ಗಂಟೆಗೆ 6 ವಾಹನ ಸಂಚಾರ ನಿಷೇಧಿಸಲಾಗಿದ್ದು, ಜುಲೈ 18ರಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ನಡೆದ ಸಭೆಯ ವೇಳೆ ಸಿಎಂ ಹಾಗೂ ಸಚಿವ ರೇವಣ್ಣ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಕಾರ್ಯದರ್ಶಿ ವೈ.ಎಸ್ ಮಲ್ಲಿಕ್ ಜು.21 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರಕರಣ ಈಗ ಸುಪ್ರೀಂಕೋರ್ಟ್ನಲ್ಲಿದ್ದರೂ ಅನುಮತಿ ನೀಡಿರುವುದು ಎಷ್ಟು ಸರಿ ಎಂದು ವನ್ಯಜೀವಿ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Advertisement
ಮೂರು ತಿಂಗಳ ಹಿಂದೆ ಕೇರಳ ಅಧಿಕಾರಿಗಳು ಬೆಂಗಳೂರಲ್ಲಿ ಸಭೆ ನಡೆಸಿದ್ದರು. ಈ ಸಭೆ ಬಳಿಕ ಅದರ ವರದಿಯನ್ನ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗಿತ್ತು. ಹೀಗಾಗಿ ಬಂಡೀಪುರದಲ್ಲಿ ರಾತ್ರಿ ಸಂಚಾರ ಬೇಕಾ ಬೇಡ್ವಾ ಅನ್ನೋದ್ರ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಆದ್ರೆ ಈ ಮಧ್ಯೆ ಕೇಂದ್ರ ಸಾರಿಗೆ ಸಚಿವಾಲಯ ಜುಲೈ 21ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಪತ್ರದಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ರಾತ್ರಿ ಸಂಚಾರಕ್ಕೆ ಅವಕಾಶ ಕೊಡುವುದಾಗಿ ಹೇಳಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
Advertisement
Advertisement
ಬಂಡೀಪುರದ ರಕ್ಷಿತಾರಣ್ಯದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ ಎಂದು ಕೇಂದ್ರ ಸಾರಿಗೆ ಸಚಿವಾಲಯದಿಂದ ಪತ್ರ ಬಂದ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಅರಣ್ಯಾಧಿಕಾರಿಗಳ ಸಭೆ ನಡೆಸಿದ್ದಾರೆ. ಈ ವೇಳೆ ಅರಣ್ಯಾಧಿಕಾರಿಗಳು ಸಿಎಂ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಕೇಂದ್ರ ಬರೆದ ಪತ್ರದಲ್ಲಿ ಏನಿದೆ?
ಸುಪ್ರೀಂಕೋರ್ಟ್ ಸಾರಿಗೆ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿತ್ತು. ಈ ಸಮಿತಿಯು ಕರ್ನಾಟಕ ಹಾಗೂ ಕೇರಳ ನಡುವಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ರಾ.ಹೆ 212ರಲ್ಲಿ ರಾತ್ರಿ ವಾಹನ ಸಂಚಾರ ಕುರಿತು ವಿವಾದವಿದೆ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಹೇಳಿದೆ. ಆದರೆ ಕರ್ನಾಟಕ ಇಲ್ಲಿ ರಾತ್ರಿ ವಾಹನ ಸಂಚಾರಕ್ಕೆ ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಗೆ ವರದಿ ಸಿದ್ಧಪಡಿಸಲಾಗಿದೆ.
ಈ ಮಧ್ಯೆ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರು ಜುಲೈ 17ರಂದು ಕೇಂದ್ರ ಸಾರಿಗೆ ಸಚಿವರನ್ನು ಭೇಟಿಯಾಗಿದ್ದ ವೇಳೆ ಹಲವು ರಾಜ್ಯಗಳ ಗಡಿ ಸಮಸ್ಯೆ ಬಗ್ಗೆ ಚರ್ಚಿಸಲಾಗಿದೆ. ಈ ವೇಳೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ರಾಷ್ಟ್ರೀಯ ಹೆದ್ದಾರಿ 212ರ ಬಗ್ಗೆಯೂ ಚರ್ಚಿಸಲಾಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯೊಂದಿಗೆ ಬಂಡಿಪುರದಲ್ಲಿ ರಾತ್ರಿ ವೇಳೆಯೂ ವಾಹನ ಸಂಚಾರ ಆರಂಭಿಸಲು ಪ್ರಸ್ತಾವಿತ ಶಿಫಾರಸ್ಸು ಮಾಡಲಾಗಿದೆ. ಇದಕ್ಕೆ ಕರ್ನಾಟಕ ಸಿಎಂ ಲೋಕೋಪಯೋಗಿ ಸಚಿವರು ಇಬ್ಬರೂ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಒಂದು ವಾರದೊಳಗೆ ಅಧಿಕೃತ ಒಪ್ಪಿಗೆ ಪತ್ರ ಕಳುಹಿಸುವುದಾಗಿ ಹೇಳಿದ್ದರು. ಮುಂದಿನ ಕೆಲ ದಿನಗಳಲ್ಲಿ ಸುಪ್ರೀಂಕೋರ್ಟ್ ಈ ವಿಷಯ ವಿಚಾರಣೆ ತೆಗೆದುಕೊಳ್ಳಲಿದ್ದು, ರಾಜ್ಯ ಸರ್ಕಾರದ ಒಪ್ಪಿಗೆ ಪತ್ರವನ್ನು ಕೂಡಲೇ ಕಳುಹಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇವೆ ಎಂದು ಬರೆಯಲಾಗಿದೆ.
ವನ್ಯಜೀವಿ ತಜ್ಞರಿಂದ ವಿರೋಧ:
ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಹಿಂದಿದ್ದ ನಾಲ್ಕೂ ಸರ್ಕಾರಗಳು ಸಮ್ಮತಿ ಸೂಚಿಸಿರಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಸಿಎಂ ಕುಮಾರಸ್ವಾಮಿ ನಿರ್ಧಾರದ ಬಗ್ಗೆ ವನ್ಯಜೀವಿ ಸಂಘಟನೆಗಳು, ಪರಿಸರ ತಜ್ಞರು, ಹಾಗೂ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಂಡೀಪುರದಲ್ಲಿ ಪ್ರತಿಭಟನೆ ನಡೆಸಲು ವನ್ಯಜೀವಿ ತಜ್ಞರು, ವನ್ಯಜೀವಿ ಸ್ವಯಂ ಸೇವಕರು, ಪರಿಸರವಾದಿಗಳು ಕೂಡ ನಿರ್ಧರಿಸಿದ್ದಾರೆ.
ಬಲಿಯಾದ ಪ್ರಾಣಿಗಳ ಸಂಖ್ಯೆ ಎಷ್ಟು?
ರಾತ್ರಿ ಸಂಚಾರ ನಿಷೇಧಕ್ಕೂ ಮುನ್ನ ಅಂದ್ರೆ 2004-09ರ ಅವಧಿಯಲ್ಲಿ ಬಂಡಿಪುರ ಅರಣ್ಯ ಪ್ರದೇಶದಲ್ಲಿ 86 ಪ್ರಾಣಿಗಳು ಅಪಘಾತಕ್ಕೆ ಬಲಿಯಾಗಿವೆ. ರಾತ್ರಿ ಸಂಚಾರ ನಿಷೇಧ ಬಳಿಕ 2010-18ರ ಅವಧಿಯಲ್ಲಿ 17 ಪ್ರಾಣಿ ಮೃತಪಟ್ಟಿವೆ. ಒಟ್ಟಿನಲ್ಲಿ ರಾತ್ರಿ ವಾಹನ ಸಂಚಾರ ನಿಷೇಧದ ಬಳಿಕ ಅಪಘಾತದಲ್ಲಿ ಸತ್ತ ಪ್ರಾಣಿಗಳ ಸಂಖ್ಯೆ ಇಳಿಕೆಯಾಗಿತ್ತು. ಇದೀಗ ಮತ್ತೆ ಸಂಚಾರ ಮುಕ್ತ ಮಾಡಿದ್ರೆ ಮತ್ತೆ ಪ್ರಾಣಿಗಳು ಬಲಿಯಾಗುತ್ತವೆ ಅಂತ ಪ್ರಾಣಿಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಯಾವ ವರ್ಷದಲ್ಲಿ ಎಷ್ಟು ಪ್ರಾಣಿಗಳು ಪ್ರಾಣ ಕಳೆದುಕೋಂಡಿವೆ ಎಂಬ ವಿವರ ಈ ಕೆಳಗಿನಂತಿದೆ:
2004 – 32, 2005 – 7, 2007 – 41, 2008 -2, 2009 – 2, 2010 – 3, 2011 – 7, 2012 – 10, 2013 – 6, 2014 – 1, 2015- 2, 2016 – 1, 2017 – 2, 2018 – 2.
ಏನಿದು ಪ್ರಕರಣ?
ಹುಲಿ, ಆನೆ, ಕಾಡೆಮ್ಮೆ ಸೇರಿದಂತೆ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಅಪಘಾತದಿಂದ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ 2009ರಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 212 ಮತ್ತು 69 ರಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಚಾಮಾರಾಜನಗರ ಜಿಲ್ಲಾ ಆಡಳಿತ ಆದೇಶ ಹೊರಡಿಸಿತ್ತು. ವಾಹನಗಳ ಸಂಚಾರ ನಿಷೇಧವನ್ನು ರದ್ದುಪಡಿಸದಂತೆ ಕರ್ನಾಟಕ ಹೈಕೋರ್ಟ್ 2010ರಲ್ಲಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇರಳ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ. ಕೇರಳ ಸರ್ಕಾರ ಈ ಹಿಂದೆ ಸಾಕಷ್ಟು ಬಾರಿ ನಿಷೇಧ ತೆರವುಗೊಳಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿಕೊಂಡಿತ್ತು. ಕೇರಳದ ಲಾಬಿಗೆ ರಾಜ್ಯ ಸರ್ಕಾರ ಮಣಿದಿರಲಿಲ್ಲ.
ಪರಿಸ್ಥಿತಿಯನ್ನು ಅಧ್ಯಯನ ನಡೆಸಲು ಸುಪ್ರೀಂ ಕೋರ್ಟ್ ಕೇಂದ್ರ ಸಾರಿಗೆ ಸಚಿವಾಲಯದ ಮುಖ್ಯ ಕಾರ್ಯದರ್ಶಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಗಳ ಜೊತೆ ಕರ್ನಾಟಕ, ತಮಿಳುನಾಡು, ಕೇರಳದ ಸಾರಿಗೆ ಸಚಿವಾಲಯದ ಅಧಿಕಾರಿಗಳನ್ನು ಹೊಂದಿದ್ದ ಸಮಿತಿಯನ್ನು ರಚಿಸುವಂತೆ ಸೂಚಿಸಿತ್ತು.
ಫ್ಲೈ ಓವರ್ ನಿರ್ಮಾಣಕ್ಕೆ ಚಿಂತನೆ:
ಬಂಡೀಪುರ ರಕ್ಷಿತಾರಣ್ಯದಲ್ಲಿ ರಾತ್ರಿ ವಾಹನ ಸಂಚಾರ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಸಚಿವ ರೇವಣ್ಣ, ಈ ಕುರಿತು ಕೇರಳ ಸರ್ಕಾರ ಸುಪ್ರೀಂಗೆ ಹೋಗಿದೆ. ಅದನ್ನು ಗಮನದಲ್ಲಿಟ್ಟು ಇದರ ಕುರಿತು ಸೂಕ್ತವಾಗಿ ಕ್ರಮ ಕೈಗೊಳ್ಳುತ್ತೇವೆ. ಬಂಡೀಪುರ ಅರಣ್ಯದಲ್ಲಿಯೂ ಕೆಲವೆಡೆಗಳಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಕಾಡು ಪ್ರಾಣಿಗಳ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಕಾಮಗಾರಿ ಮಾಡುವ ಕುರಿತು ಚರ್ಚಿಸಲಾಗುವುದು. ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ಬಗ್ಗೆ ಇನ್ನು ನಿರ್ಧಾರವಾಗಿಲ್ಲ. ಮುಖ್ಯ ಕಾರ್ಯದರ್ಶಿ ಜೊತೆ ಈ ಕುರಿತು ಸಭೆಯ ನಂತರ ಓಡಾಟದ ಬಗ್ಗೆ ತೀರ್ಮಾನ ಮಾಡಲಾಗುವುದು ಅಂತ ಅವರು ತಿಳಿಸಿದ್ದಾರೆ.
ವಾಟಾಳ್ ವಿರೋಧ:
ಇತ್ತ ರಾತ್ರಿ ಸಂಚಾರ ಮರು ಪ್ರಾರಂಭವಾದ ಹಿನ್ನೆಲೆಯಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಭೇಟಿ ಬಳಿಕ ಮಾತನಾಡಿ, ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಅಂತ ಆಗ್ರಹಿಸಿದ್ದಾರೆ. ಒಂದು ವೇಳೆ ಅನುಮತಿ ಕೊಟ್ರೆ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡ್ತೀನಿ ಅಂತ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಬುದ್ಧಿವಂತಿಕೆಯಿಂದ ಅರಣ್ಯಪ್ರದೇಶದಲ್ಲಿ ರಾತ್ರಿ ಸಮಯ ವಾಹನ ಸಂಚಾರಕ್ಕೆ ಮುಂದಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡಬಾರದು. ಇದು ಮರದ ಮಾಫಿಯಾದವರ ಕೈವಾಡವಾಗಿದೆ. ಆದ್ರೆ ಯಾವುದೇ ಕಾರಣಕ್ಕೂ ಸರ್ಕಾರ ತನ್ನ ನಿರ್ಧಾರದಿಂದ ವಾಪಸ್ ಪಡೆಯಬಾರದು. ಕೇಂದ್ರ ಕೂಡಾ ಇದಕ್ಕೆ ಪ್ರಯತ್ನ ಮಾಡಬಾರದು ಆಕ್ರೋಶ ವ್ಯಕ್ತಪಡಿಸಿದ್ದಾರೆ.