– ಇದು ನಮ್ಮ ಮೇಲಿನ ದಾಳಿಯೆಂದ ಮುಸ್ಲಿಮರು
– ರಂಜಾನ್ ದಿನ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಮಂಡನೆಗೆ ಕೇಂದ್ರ ಸರ್ಕಾರ ಸಕಲ ತಯಾರಿ ಮಾಡಿಕೊಂಡಿದೆ. ಏಪ್ರಿಲ್ 4ಕ್ಕೆ ಬಜೆಟ್ ಅಧಿವೇಶನ ಅಂತ್ಯವಾಗಲಿದ್ದು, ಏಪ್ರಿಲ್ 2ಕ್ಕೆ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ (Lok Sabha) ಮಂಡನೆಯಾಗಲಿದೆ. ಇದು ದೇಶದ ಮುಸ್ಲಿಂ ಸಮುದಾಯದಲ್ಲಿ ಪ್ರತಿಭಟನೆಗೆ ಕಾರಣವಾಗಿದೆ.
ಈ ಮಸೂದೆಯು ವಕ್ಫ್ ಆಸ್ತಿಗಳ ಆಡಳಿತ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ ಎಂದು ಸರ್ಕಾರ ಹೇಳಿದೆ. ಆದರೂ, ಇದು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ‍್ಯ ಮತ್ತು ಆಸ್ತಿ ಹಕ್ಕುಗಳ ಮೇಲೆ ದಾಳಿ ಎಂದು ವಿರೋಧ ಪಕ್ಷಗಳು ಮತ್ತು ಮುಸ್ಲಿಂ ನಾಯಕರು ಆರೋಪಿಸಿದ್ದಾರೆ. ಇದರ ಭಾಗವಾಗಿ ರಂಜಾನ್ ದಿನವೇ ದೇಶಾದ್ಯಂತ ಮುಸ್ಲಿಮರು ಕಪ್ಪುಬಟ್ಟೆ ಧರಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಪ್ರತಿಭಟನೆ ದಾಖಲಿಸಿದ್ದಾರೆ. ಇದನ್ನೂ ಓದಿ: ನನ್ನ ಕೈಲಾದಷ್ಟು ಸಹಾಯ ಮಾಡಿದ್ದೀನಿ, ನೀವು ಕೈಜೋಡಿಸಿ- ಅಭಿಮಾನಿಗಳಿಗೆ ಕಿಚ್ಚ ಮನವಿ
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಇಂತಹದೊಂದು ಚಳುವಳಿಗೆ ಕಳೆದ ಶುಕ್ರವಾರ ಚಾಲನೆ ಕೊಟ್ಟಿತ್ತು. ಇಂದು ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಸೇರಿದಂತೆ ಹಲವು ರಾಜ್ಯಗಳಲ್ಲಿ ಮಸೀದಿಗಳಲ್ಲಿ ಜನರು ಕಪ್ಪು ಬಟ್ಟೆಯೊಂದಿಗೆ ಒಟ್ಟುಗೂಡಿ ಪ್ರಾರ್ಥನೆ ಸಲ್ಲಿಸಿದರು. ಸಮಾಜವಾದಿ ಪಕ್ಷದ ಸಂಸದ ಜಿಯಾ ಉರ್ ರೆಹಮಾನ್ ಬಾರ್ಕ್ ಮಾತನಾಡಿ, ನಾವು ಈ ಬಿಲ್‌ಗೆ ವಿರುದ್ಧವಾಗಿದ್ದೇವೆ ಮತ್ತು ಬೀದಿಗಳಿಂದ ಸಂಸತ್‌ವರೆಗೆ ಪ್ರತಿಭಟಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Greater Noida| ಕೂಲರ್ ನಿರ್ಮಾಣದ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ – 3 ಕಾರ್ಖಾನೆಗಳು ಭಸ್ಮ
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಈ ಬಿಲ್ ಅಸಂವಿಧಾನಿಕವಾಗಿದ್ದು, ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸಂಸದ ನಾಸೀರ್ ಹುಸೇನ್ ಕೂಡ ಈ ಬಿಲ್ ದೇಶದಲ್ಲಿ ಗಲಭೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ. ಈ ಬಿಲ್‌ನಿಂದ ಮಸೀದಿಗಳು, ದರ್ಗಾಗಳು ಮತ್ತು ಕಬರಸ್ಥಾನಗಳಂತಹ ವಕ್ಫ್ ಆಸ್ತಿಗಳು ಸರ್ಕಾರದ ನಿಯಂತ್ರಣಕ್ಕೆ ಒಳಪಡಬಹುದು ಎಂದು ಮುಸ್ಲಿಂ ಸಮುದಾಯ ಆತಂಕ ವ್ಯಕ್ತಪಡಿಸಿದೆ. ಇದನ್ನೂ ಓದಿ: ಪ್ರಾರ್ಥನೆ ಮಾಡುತ್ತಿದ್ದಾಗಲೇ ಭೂಕಂಪ – 700 ಸಾವು, 60 ಮಸೀದಿಗಳಿಗೆ ಹಾನಿ: ಮ್ಯಾನ್ಮರ್ ಮುಸ್ಲಿಂ ಸಂಘಟನೆ
1. ವಕ್ಫ್ ಆಸ್ತಿಗಳ ಸರ್ವೆ ಮತ್ತು ನಿಯಂತ್ರಣ:
ಹಿಂದಿನ ಕಾನೂನು (1995): ವಕ್ಫ್ ಆಸ್ತಿಗಳ ಸರ್ವೆಯನ್ನು ರಾಜ್ಯ ಸರ್ಕಾರವು ನೇಮಿಸಿದ ಸರ್ವೆ ಆಯುಕ್ತರು ನಡೆಸುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪ ಕಡಿಮೆ ಇತ್ತು.
ಹೊಸ ತಿದ್ದುಪಡಿ (2024): ಈ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಲಾಗಿದೆ. ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ರಾಜ್ಯದ ಕಂದಾಯ ಕಾನೂನುಗಳಿಗೆ ಅನುಗುಣವಾಗಿ ಸರ್ವೆ ನಡೆಯಲಿದೆ. ಇದರಿಂದ ಸರ್ಕಾರಕ್ಕೆ ವಕ್ಫ್ ಆಸ್ತಿಗಳ ಮೇಲೆ ಹೆಚ್ಚಿನ ನಿಯಂತ್ರಣ ಸಿಗಲಿದೆ.
2. ವಕ್ಫ್ ಘೋಷಣೆಗೆ ಷರತ್ತುಗಳು:
ಹಿಂದಿನ ಕಾನೂನು: ವಕ್ಫ್ ಘೋಷಿಸಲು ಯಾವುದೇ ನಿರ್ದಿಷ್ಟ ಅವಧಿಯ ಷರತ್ತು ಇರಲಿಲ್ಲ. ಯಾರಾದರೂ ಮುಸ್ಲಿಂ ವ್ಯಕ್ತಿ ತಮ್ಮ ಆಸ್ತಿಯನ್ನು ವಕ್ಫ್ ಆಗಿ ಘೋಷಿಸಬಹುದಿತ್ತು.
ಹೊಸ ತಿದ್ದುಪಡಿ: ಇಸ್ಲಾಂ ಧರ್ಮವನ್ನು ಕನಿಷ್ಠ ಐದು ವರ್ಷಗಳ ಕಾಲ ಪಾಲಿಸಿದ ವ್ಯಕ್ತಿಯೊಬ್ಬರಿಗೆ ಮಾತ್ರ ವಕ್ಫ್ ಘೋಷಿಸುವ ಅಧಿಕಾರವನ್ನು ನೀಡಲಾಗಿದೆ. ಇದರಿಂದ ದುರುಪಯೋಗವನ್ನು ತಡೆಗಟ್ಟುವ ಉದ್ದೇಶವಿದೆ.
3. ಮಹಿಳೆಯರಿಗೆ ಆಸ್ತಿ ಹಕ್ಕು:
ಹಿಂದಿನ ಕಾನೂನು: ಮಹಿಳೆಯರಿಗೆ ವಕ್ಫ್ ಆಸ್ತಿಯಲ್ಲಿ ಹಕ್ಕುಗಳನ್ನು ಸ್ಪಷ್ಟವಾಗಿ ಖಾತ್ರಿಪಡಿಸುವ ಯಾವುದೇ ನಿರ್ದಿಷ್ಟ ಉಲ್ಲೇಖ ಇರಲಿಲ್ಲ.
ಹೊಸ ತಿದ್ದುಪಡಿ: ಮಹಿಳೆಯರಿಗೆ ವಕ್ಫ್ ಆಸ್ತಿಯಲ್ಲಿ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ನಿಬಂಧನೆ ಸೇರಿಸಲಾಗಿದೆ. ಇದು ಲಿಂಗ ಸಮಾನತೆಯತ್ತ ಒಂದು ಹೆಜ್ಜೆ ಎಂದು ಪರಿಗಣಿಸಲಾಗಿದೆ.
4. ವಕ್ಫ್ ಮಂಡಳಿಯ ರಚನೆ:
ಹಿಂದಿನ ಕಾನೂನು: ಕೇಂದ್ರ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮಹಿಳೆಯರು ಅಥವಾ ಮುಸ್ಲಿಮೇತರ ಸದಸ್ಯರನ್ನು ಸೇರಿಸುವ ಕಡ್ಡಾಯ ನಿಯಮ ಇರಲಿಲ್ಲ.
ಹೊಸ ತಿದ್ದುಪಡಿ: ಕೇಂದ್ರ ವಕ್ಫ್ ಮಂಡಳಿಯಲ್ಲಿ ಕನಿಷ್ಠ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮುಸ್ಲಿಮೇತರ ಸದಸ್ಯರನ್ನು ನೇಮಿಸುವುದು ಕಡ್ಡಾಯವಾಗಿದೆ. ಇದೇ ರೀತಿ ರಾಜ್ಯ ವಕ್ಫ್ ಮಂಡಳಿಗಳಲ್ಲಿಯೂ ಈ ಬದಲಾವಣೆಯನ್ನು ತರಲಾಗಿದೆ.
5. ಲೆಕ್ಕಪರಿಶೋಧನೆ (ಆಡಿಟ್):
ಹಿಂದಿನ ಕಾನೂನು: ವಕ್ಫ್ ಮಂಡಳಿಗಳ ಖಾತೆಗಳ ಲೆಕ್ಕಪರಿಶೋಧನೆಯನ್ನು ಮಂಡಳಿಯೇ ನೇಮಿಸಿದ ಲೆಕ್ಕಪರಿಶೋಧಕರು ಮಾಡುತ್ತಿದ್ದರು. ರಾಜ್ಯ ಸರ್ಕಾರಕ್ಕೂ ಆಡಿಟ್ ಮಾಡುವ ಅವಕಾಶ ಇತ್ತು.
ಹೊಸ ತಿದ್ದುಪಡಿ: ರಾಜ್ಯ ಸರ್ಕಾರವು ರಚಿಸುವ ಲೆಕ್ಕಪರಿಶೋಧಕರ ಸಮಿತಿಯೇ ಆಡಿಟ್ ನಡೆಸಬೇಕು ಎಂದು ತಿದ್ದುಪಡಿ ತರಲಾಗಿದೆ. ಇದರಿಂದ ಸರ್ಕಾರದ ಮೇಲ್ವಿಚಾರಣೆ ಹೆಚ್ಚಾಗಲಿದೆ.
6. ಆಸ್ತಿಯ ನೋಂದಣಿ ಮತ್ತು ಪಾರದರ್ಶಕತೆ:
ಹಿಂದಿನ ಕಾನೂನು: ವಕ್ಫ್ ಆಸ್ತಿಗಳ ನೋಂದಣಿ ಮತ್ತು ವಿವರಗಳ ಸಲ್ಲಿಕೆಗೆ ಕಡ್ಡಾಯ ಸಮಯಮಿತಿ ಇರಲಿಲ್ಲ.
ಹೊಸ ತಿದ್ದುಪಡಿ: ಎಲ್ಲ ವಕ್ಫ್ ಆಸ್ತಿಗಳನ್ನು ಕಾಯಿದೆಯಡಿ ನೋಂದಾಯಿಸುವುದು ಕಡ್ಡಾಯವಾಗಿದ್ದು, ಆರು ತಿಂಗಳೊಳಗೆ ವಿವರಗಳನ್ನು ಸಲ್ಲಿಸಬೇಕು. ಪ್ರತಿ ಐದು ವರ್ಷಗಳಿಗೊಮ್ಮೆ ಸರ್ವೆ ನಡೆಸುವ ನಿಯಮವೂ ಜಾರಿಗೆ ಬರಲಿದೆ.