ಪಾಟ್ನಾ: ದೇಶಾದ್ಯಂತ ವಿದ್ಯುತ್ ವಿತರಿಸುವ ಸಂಸ್ಥೆಗಳು ಅಥವಾ ಎಸ್ಕಾಂಗಳು ಲೋಡ್ ಶೆಡ್ಡಿಂಗ್ ಮಾಡಿದರೆ ದಂಡ ಪಾವತಿ ಮಾಡಬೇಕು ಎಂದು ಇಂಧನ ಸಚಿವರಾದ ಆರ್ ಕೆ ಸಿಂಗ್‍ರವರು ಬಿಹಾರ್ ನ ಪಾಟ್ನಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಇಂಧನ ಸಚಿವರಾದ ಆರ್ ಕೆ ಸಿಂಗ್‍ರವರು ಮಂಗಳವಾರ ಕೇಂದ್ರ ಸರ್ಕಾರದ 4 ವರ್ಷಗಳ ಸಾಧನೆ ಕುರಿತು 7 ರಾಜ್ಯದ ರಾಜಧಾನಿಗಳ ಪತ್ರಕರ್ತರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಈ ವೇಳೆ ದೇಶಾದ್ಯಂತ ಇರುವ ಎಲ್ಲಾ ವಿದ್ಯುತ್ ವಿತರಣಾ ಸಂಸ್ಥೆಗಳೇ ಲೋಡ್ ಶೆಡ್ಡಿಂಗ್ ಮಾಡಿದರೆ ಇದರಿಂದಾಗುವ ನಷ್ಟವನ್ನು ಖುದ್ದು ಸಂಸ್ಥೆಗಳೇ ಭರಿಸಬೇಕು ಎಂದು ತಿಳಿಸಿದ್ದಾರೆ.
ದೇಶದಲ್ಲಿ ಶೇ.15ರಷ್ಟು ಆರ್ಥಿಕ ನಷ್ಟ ವಿದ್ಯುತ್ ಕಡಿತದಿಂದಾಗಿ ಸಂಭವಿಸುತ್ತಿದೆ. ಇದು ದೇಶದ ಬೆಳವಣಿಗೆಗೆ ಮಾರಕವಾಗಿದೆ. ವಿದ್ಯುತ್ ಕಡಿತದಿಂದಾಗಿ ಶೇ.15 ಹಾಗೂ ಅದಕ್ಕಿಂತ ಹೆಚ್ಚಿನ ನಷ್ಟ ಉಂಟಾದರೆ ಆ ನಷ್ಟವನ್ನು ವಿದ್ಯುತ್ ವಿತರಣಾ ಸಂಸ್ಥೆಗಳೇ ಪಾವತಿ ಮಾಡಬೇಕು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಸಿದ್ದ ಪಡಿಸುತ್ತಿರುವ ನೂತನ ಇಂಧನ ನೀತಿಯಲ್ಲಿ ಈ ವಿಚಾರವನ್ನು ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದ್ದು. ಈ ಯೋಜನೆಗೆ ಸಾರ್ವಜನಿಕರಿಂದ ಮಾಹಿತಿ ಮತ್ತು ಸಲಹೆಗಳನ್ನು ಪಡೆದುಕೊಂಡು ಮುಂದಿನ ಹಣಕಾಸು ವರ್ಷದಲ್ಲಿ ಈ ನೂತನ ನೀತಿಯನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಕುರಿತು ಮಾತನಾಡಿದ ಅವರು ಶೀಘ್ರವಾಗಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಬಿಹಾರ ಹಾಗೂ ಇತರೆ ರಾಜ್ಯಗಳಲ್ಲಿ ಹೆಚ್ಚಿನ ರೈತರು ಡೀಸೆಲ್ ಪಂಪ್‍ಗಳನ್ನ ಬಳಸುತ್ತಿದ್ದಾರೆ. ಡೀಸೆಲ್‍ಗೆ ಪರ್ಯಾಯವಾಗಿ ಸೋಲಾರ್ ಪಂಪ್‍ಸೆಟ್‍ಗಳನ್ನು ಬಳಕೆ ಮಾಡಲು ರೈತರಿಗೆ ಕುಸುಮ್ ಯೋಜನೆಯನ್ನು ಜಾರಿಗೊಳಿಸಿದ್ದೇವೆಂದು ಮಾಹಿತಿ ನೀಡಿದ್ದಾರೆ. ರೈತರ ಅಗತ್ಯತೆಗೆ ತಕ್ಕಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳುತ್ತದೆ ಎಂದು ಈ ವೇಳೆ ತಿಳಿಸಿದ್ದಾರೆ.