– ಭಾರತ-ಪಾಕ್ ಮಧ್ಯಸ್ಥಿಕೆ ವಿಚಾರದಲ್ಲಿ ಟ್ರಂಪ್ ಮರು ಹೇಳಿಕೆ
– ಚೀನಾ ವ್ಯಾಪಾರ ಒಪ್ಪಂದದ ಕುರಿತೂ ಚರ್ಚೆ ಸಾಧ್ಯತೆ
ನವದೆಹಲಿ: ಇಂದಿನಿಂದ (ಡಿ.1) ಸಂಸತ್‌ನ (Parliament) ಚಳಿಗಾಲದ ಅಧಿವೇಶನ (Winter Session) ಆರಂಭವಾಗಲಿದ್ದು, ಡಿ.19ರಂದು ಕೊನೆಗೊಳ್ಳಲಿದೆ. ಈ ಅಧಿವೇಶನದಲ್ಲಿ ಆಡಳಿತ ಎನ್‌ಡಿಎ ಪಕ್ಷ ಗಾಂಧಿ ಕುಟುಂಬದ ವಿರುದ್ಧ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹೊಸ ಎಫ್‌ಐಆರ್ ಅಸ್ತ್ರ ಪ್ರಯೋಗಹಿಸಲು ಸಜ್ಜಾಗಿದ್ದರೆ, ಇತ್ತ ವಿಪಕ್ಷಗಳು ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದ ಉಳುಕುಗಳನ್ನು ಎತ್ತಿತೋರಿಸಲು ಸಜ್ಜಾಗಿವೆ. ಒಟ್ಟಿನಲ್ಲಿ ಕೇಂದ್ರ ಮತ್ತು ವಿಪಕ್ಷಗಳ ನಡುವೆ ವಾದ-ಪ್ರತಿವಾದ ತಾರಕಕ್ಕೇರಲಿವೆ.
ತೃಣಮೂಲ ಕಾಂಗ್ರೆಸ್, ಡಿಎಂಕೆ ಮತ್ತು ಸಮಾಜವಾದಿ ಪಕ್ಷಗಳು, ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಗೆ (SIR) ತೀವ್ರ ವಿರೋಧ ವ್ಯಕ್ತಪಡಿಸಲು ನಿರ್ಧರಿಸಿವೆ. ಜೊತೆಗೆ ಚುನಾವಣಾ ಆಯೋಗ ನಡೆಸುತ್ತಿರುವ ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ರಾಜಕೀಯ ಹಸ್ತಕ್ಷೇಪ ಮತ್ತು ಅಕ್ರಮಗಳನ್ನು ಎತ್ತಿತೋರಿಸಲು ಸಜ್ಜಾಗಿವೆ.
19 ದಿನಗಳಲ್ಲಿ 15 ಕಲಾಪಗಳು
ಈ 19 ದಿನಗಳ ಅವಧಿಯಲ್ಲಿ ಒಟ್ಟು 15 ಕಲಾಪಗಳು ನಡೆಯಲಿವೆ. ಡಿಸೆಂಬರ್ 5 ಮತ್ತು 19 ರಂದು ಖಾಸಗಿ ಸದಸ್ಯರ ಮಸೂದೆಗಳನ್ನ ಮತ್ತು ಡಿಸೆಂಬರ್ 12 ರಂದು ಖಾಸಗಿ ಸದಸ್ಯರ ನಿರ್ಣಯಗಳನ್ನ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಬಾರಿಯ ಅಧಿವೇಶನದಲ್ಲಿ ಪ್ರಮುಖ ಶಾಸಕಾಂಗ ಮತ್ತು ಹಣಕಾಸು ವ್ಯವಹಾರಗಳನ್ನು ಕೈಗೆತ್ತಿಕೊಳ್ಳಲು ನಿನ್ನೆ ನಡೆಸ ಸರ್ವಪಕ್ಷಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.
ಈ ಕಾರ್ಯಸೂಚಿಯ ಭಾಗವಾಗಿ, ರಾಷ್ಟ್ರಪತಿಯವರು ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ, ಮಣಿಪುರ ಸರಕು ಮತ್ತು ಸೇವಾ ತೆರಿಗೆ (ಎರಡನೇ ತಿದ್ದುಪಡಿ) ಮಸೂದೆ ಮತ್ತು ಕೇಂದ್ರೀಯ ಅಬಕಾರಿ (ತಿದ್ದುಪಡಿ) ಮಸೂದೆ ಸೇರಿದಂತೆ ಹಲವಾರು ಪ್ರಮುಖ ಮಸೂದೆಗಳನ್ನು ಮಂಡಿಸಲು ಶಿಫಾರಸು ಮಾಡಿದ್ದಾರೆ.
ಅಧಿವೇಶನದ ಹಿನ್ನೆಲೆಯಲ್ಲಿ ನಿನ್ನೆ ಆಡಳಿತರೂಢ ಎನ್‌ಡಿಎ ಸರ್ಕಾರ ಸರ್ವಪಕ್ಷಗಳ ಸಭೆ ನಡೆಸಿ ಸುಗಮ ಕಲಾಪಕ್ಕೆ ಮನವಿ ಮಾಡಿತು. ಇತ್ತ ವಿರೋಧ ಪಕ್ಷಗಳು ತಯಾರಿ ನಡೆಸಿದ್ದು, ಸಂಸತ್ತಿನಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಇಂಡಿಯಾ ಮೈತ್ರಿಕೂಟದ ಸದನ ನಾಯಕರ ಸಭೆಯನ್ನು ಕರೆಯಲಾಗಿದೆ.
ಕಾಂಗ್ರೆಸ್ ಪಕ್ಷವು ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳು, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR), ಮತ್ತು ಚೀನಾದೊಂದಿಗಿನ ವ್ಯಾಪಾರ ಒಪ್ಪಂದಗಳು ಹಾಗೂ ಸಮಸ್ಯೆಗಳ ಕುರಿತು ಚರ್ಚೆಗೆ ಒತ್ತಾಯಿಸುವ ಸಾಧ್ಯತೆಯಿದೆ. ಅಲ್ಲದೇ ದೆಹಲಿ ಸ್ಫೋಟ ಹಾಗೂ ಮಾಲಿನ್ಯದ ಬಗ್ಗೆ ವಿಪಕ್ಷಗಳು ಧ್ವನಿ ಎತ್ತಲಿವೆ.
ಮಂಡನೆಯಾಗಲಿರುವ ಪ್ರಮುಖ ಮಸೂದೆಗಳು
ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ, 2025
ಮಣಿಪುರ ಸರಕು ಮತ್ತು ಸೇವಾ ತೆರಿಗೆ (ಎರಡನೇ ತಿದ್ದುಪಡಿ) ಮಸೂದೆ, 2025
ಕೇಂದ್ರೀಯ ಅಬಕಾರಿ (ತಿದ್ದುಪಡಿ) ಮಸೂದೆ, 2025
ಕೈಗೆತ್ತಿಕೊಳ್ಳುವ ಸಾಧ್ಯತೆಯಿರುವ ಇತರ ಪ್ರಸ್ತಾವನೆಗಳು
ಜನ್ ವಿಶ್ವಾಸ್ (ಪ್ರಾವಧಾನಗಳ ತಿದ್ದುಪಡಿ) ಮಸೂದೆ, 2025
ದಿವಾಳಿತನ ಮತ್ತು ದಿವಾಳಿ ಸಂಹಿತೆ (ತಿದ್ದುಪಡಿ) ಮಸೂದೆ, 2025
ರದ್ದುಗೊಳಿಸುವ ಮತ್ತು ತಿದ್ದುಪಡಿ ಮಾಡುವ ಮಸೂದೆ, 2025
ರಾಷ್ಟ್ರೀಯ ಹೆದ್ದಾರಿಗಳು (ತಿದ್ದುಪಡಿ) ಮಸೂದೆ, 2025
ಅಣುಶಕ್ತಿ ಮಸೂದೆ, 2025
ಕಾರ್ಪೊರೇಟ್ ಕಾನೂನುಗಳು (ತಿದ್ದುಪಡಿ) ಮಸೂದೆ, 2025
ಸೆಕ್ಯುರಿಟೀಸ್ ಮಾರುಕಟ್ಟೆ ಸಂಹಿತೆ ಮಸೂದೆ (SMC), 2025
ವಿಮಾ ಕಾನೂನುಗಳು (ತಿದ್ದುಪಡಿ) ಮಸೂದೆ, 2025
ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ) ಮಸೂದೆ, 2025
ಉನ್ನತ ಶಿಕ್ಷಣ ಆಯೋಗದ ಮಸೂದೆ, 2025



