ನವದೆಹಲಿ: ದಲಿತ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ 2.5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಅಂತರ್ಜಾತಿ ವಿವಾಹಕ್ಕೆ ಬೆಂಬಲ ನೀಡಿ ಸಮಾಜದಲ್ಲಿ ಏಕತೆ ಮೂಡಿಸುವ ಸಲುವಾಗಿ ಡಾ. ಬಿಆರ್. ಅಂಬೇಡ್ಕರ್ ಯೋಜನೆಯನ್ನು 2013ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿತ್ತು. ಈ ವೇಳೆ ಅಂತರ್ಜಾತಿ ವಿವಾಹವಾಗುವ ವಧು ಅಥವಾ ವರ ದಲಿತ ಸಮುದಾಯಕ್ಕೆ ಸೇರಿರಬೇಕು ಹಾಗೂ ಅವರ ಕುಟುಂಬದ ಆದಾಯ 5 ಲಕ್ಷ ರೂ. ಗಿಂತ ಜಾಸ್ತಿ ಇರಬಾರದು ಎನ್ನುವ ನಿಯಮವನ್ನು ವಿಧಿಸಲಾಗಿತ್ತು. ವಾರ್ಷಿಕವಾಗಿ 500 ಮಂದಿಗೆ ಈ ಆರ್ಥಿಕ ಸಹಾಯವನ್ನು ನೀಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿತ್ತು.
Advertisement
ಆದರೆ ಈಗ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಎಲ್ಲ ರಾಜ್ಯಗಳಿಗೆ ಆದೇಶ ಹೊರಡಿಸಿದ್ದು, ಈ ಆದೇಶದಲ್ಲಿ 5 ಲಕ್ಷ ರೂ. ಆದಾಯ ಇರಬೇಕೆಂಬ ನಿಯಮವನ್ನು ಕೈ ಬಿಟ್ಟಿದೆ. ಮದುವೆಯಾದ ಎಲ್ಲರಿಗೂ ಪ್ರೋತ್ಸಾಹ ಧನವನ್ನು ನೀಡಲಾಗುವುದು ಎಂದು ತಿಳಿಸಿದೆ.
Advertisement
Advertisement
ನಿಯಮ ಏನು ಹೇಳುತ್ತೆ?
ಈ ಯೋಜನೆಯ ಫಲಾನುಭವಿಯಾಗಲು ದಂಪತಿಗೆ ಮೊದಲ ವಿವಾಹವಾಗಿರಬೇಕು. ಹಿಂದೂ ವಿವಾಹ ಕಾಯ್ದೆಯ ಅಡಿಯಲ್ಲಿ ವಿವಾಹ ನೋಂದಣಿಯಾಗಿರಬೇಕು. ಯೋಜನೆಗೆ ಬೇಕಾದ ಪೂರಕ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಿದರೆ ಸರ್ಕಾರವು 2.5 ಲಕ್ಷ ರೂ. ಹಣವನ್ನು ನೇರವಾಗಿ ನೀಡುತ್ತದೆ. ಈ ಹಣವನ್ನು ಪಡೆಯಲು ದಂಪತಿ ತಮ್ಮ ಆಧಾರ್ ಸಂಖ್ಯೆ ನೊಂದಣಿ ಮಾಡಿಸಿರುವ ಬ್ಯಾಂಕ್ ಖಾತೆಯ ಪೂರಕ ದಾಖಲೆಗಳನ್ನು ನೀಡಬೇಕಾಗುತ್ತದೆ.
Advertisement
ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುವ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ. ಅವುಗಳು ಯಾವುದೇ ಆದಾಯ ಮಿತಿ ವಿಧಿಸದ ಕಾರಣ ಸರ್ಕಾರ ಈಗ ಈ ನಿರ್ಧಾರ ಕೈಗೊಂಡಿದೆ ಎಂದು ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆ ಜಾರಿಗೆಯಾದ ನಂತರ 2014-15 ಸಾಲಿನಲ್ಲಿ 5 ದಂಪತಿಗಳಿಗೆ ಹಣ ಮಂಜೂರು ಆಗಿದ್ದರೆ, 2015-16 ಸಾಲಿನಲ್ಲಿ ಇಲಾಖೆಗೆ 522 ಅರ್ಜಿಗಳು ಸಲ್ಲಿಕೆಯಾಗಿದ್ದು, 72 ಅರ್ಜಿಗಳಿ ಹಣ ಸಿಕ್ಕಿದೆ. 2016-17 ಸಾಲಿನಲ್ಲಿ ಸಲ್ಲಿಕೆಯಾದ 736 ಅರ್ಜಿಗಳಲ್ಲಿ 45 ಅರ್ಜಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ವರ್ಷದಲ್ಲಿ ಇದುವರೆಗೂ 409 ಅರ್ಜಿಗಳು ಸಲ್ಲಿಕೆಯಾಗಿದ್ದು, 74 ದಂಪತಿಗಳ ಅರ್ಜಿಗಳನ್ನು ಅಂಗೀಕರಿಸಲಾಗಿದೆ.
ಈ ನೆರವು ಪಡೆಯಲು ವಿಧಿಸಲಾಗಿರುವ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಕಾರಣ ಬಹಳಷ್ಟು ಅರ್ಜಿಗಳು ತಿರಸ್ಕೃತಗೊಂಡಿದೆ. ವಿಶೇಷವಾಗಿ ಹಿಂದೂ ಮದುವೆ ಕಾಯ್ದೆಯಡಿ ಈ ಮದುವೆ ನೊಂದಣಿ ಆಗಬೇಕೆಂಬ ನಿಯಮವಿದ್ದರೂ ಬಹಳಷ್ಟು ಮದುವೆಗಳು ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ನೊಂದಣಿ ಆಗುತ್ತಿರುವ ಕಾರಣ ಅರ್ಜಿ ತಿರಸ್ಕೃತಗೊಳ್ಳುತ್ತಿವೆ. ಈ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಪೂರಕ ಅರಿವು ಕಡಿಮೆ ಇದ್ದು, ಯೋಜನೆ ಫಲಾನುಭವಿಯಾಗಲು ಸಂಸದ, ಶಾಸಕ ಅಥವಾ ಜಿಲ್ಲಾಧಿಕಾರಿಗಳ ಶಿಫಾರಸ್ಸು ಅಗತ್ಯವಿದೆ. ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಂದ ಮಾತ್ರ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದಲ್ಲಿ ಎಷ್ಟು ಮಂದಿ ಅಂತರ್ಜಾತಿ ವಿವಾಹವಾಗಿದ್ದಾರೆ ಎನ್ನುವ ನಿಖರ ಮಾಹಿತಿ ಸಿಗುವುದು ಕಷ್ಟ. ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯ ನಂತರ ಸರ್ಕಾರ ಜಾತಿ ಡೇಟಾವನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಿಲ್ಲ. ಆದರೆ ಕೆಲ ಸಂಶೋಧಕರು ಈ ವಿಚಾರದ ಬಗ್ಗೆ ಸಂಶೋಧನೆ ನಡೆಸಿ ವರದಿ ನೀಡಿದ್ದಾರೆ.
ಜಮ್ಮು ಕಾಶ್ಮೀರ, ರಾಜಸ್ಥಾನ, ಮಧ್ಯಪ್ರದೇಶ, ಮೇಘಾಲಯ, ತಮಿಳುನಾಡು ರಾಜ್ಯಗಳಲ್ಲಿ ಶೇ.95 ರಷ್ಟು ವಿವಾಹಗಳು ತಮ್ಮ ಜಾತಿಯಲ್ಲೇ ನಡೆಯುತ್ತವೆ. ಇನ್ನು ಪಂಜಾಬ್, ಸಿಕ್ಕಿಂ, ಗೋವಾ, ಕೇರಳ ರಾಜ್ಯಗಳಲ್ಲಿ ಶೇ.80 ವಿವಾಹಗಳು ತಮ್ಮ ಜಾತಿ ಮಿತಿಯಲ್ಲೇ ನಡೆಯುತ್ತವೆ ಎಂದು ಕೆಲ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ.