ನವದೆಹಲಿ: ಮೊಬೈಲ್ ಸಿಮ್ ಕಾರ್ಡ್ ಡೀಲರ್‌ಗಳ (Mobile Sim Card Dealer) ಪೊಲೀಸ್ ಪರಿಶೀಲನೆ (Police Verification) ಮತ್ತು ಬಯೋಮೆಟ್ರಿಕ್ (Biometric) ಪರಿಶೀಲನೆ ಕಡ್ಡಾಯ ಮಾಡಲಾಗಿದೆ. ಇದರ ಜೊತೆಗೆ ಎಲ್ಲಾ ಪಾಯಿಂಟ್ ಆಫ್ ಸೇಲ್ ಡೀಲರ್‌ಗಳ ನೋಂದಣಿಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಕಡ್ಡಾಯ ನಿಯಮ ಉಲ್ಲಂಘಿಸಿದರೆ 10 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಮರು ಮೊದಲು ಹಿಂದುಗಳಾಗಿದ್ದರು, ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು: ಗುಲಾಂ ನಬಿ ಆಜಾದ್
ಸಂಚಾರ ಸಾಥಿ ಪೋರ್ಟಲ್ ಪ್ರಾರಂಭವಾದಾಗಿನಿಂದ ಅಕ್ರಮವಾಗಿ ಪಡೆದ 52 ಲಕ್ಷ ಸಂಪರ್ಕಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲಾಗಿದೆ. ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ 67,000 ಡೀಲರ್‌ಗಳನ್ನು ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿದೆ. ಮೇ 2023 ರಿಂದ 300 ಸಿಮ್ ಕಾರ್ಡ್ ವಿತರಕರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಹಿಂದೆ ಜನರು ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಬಲ್ಕ್ ರೀತಿ ಖರೀದಿಸುತ್ತಿದ್ದರು. ಸಿಮ್ ಕಾರ್ಡ್ ಬಲ್ಕ್ ಆಗಿ ಖರೀದಿಸಲು ಅವಕಾಶವಿತ್ತು. ಇನ್ನು ಮುಂದೆ ಇದನ್ನು ಕೊನೆಗೊಳಿಸಿ ಸರಿಯಾದ ವ್ಯಾಪಾರ ಸಂಪರ್ಕದ ನಿಬಂಧನೆಯನ್ನು ತರುತ್ತೇವೆ. ಇದರಿಂದಾಗಿ ಮೋಸದ ಕರೆಗಳನ್ನು ನಿಲ್ಲಿಸಲು ಸಹಾಯವಾಗಲಿದೆ ಎಂದರು.
ದೇಶದಲ್ಲಿ 10 ಲಕ್ಷ ಸಿಮ್ ಡೀಲರ್‌ಗಳಿದ್ದು, ಅವರಿಗೆ ಪೊಲೀಸ್ ಪರಿಶೀಲನೆಗೆ ಸಾಕಷ್ಟು ಸಮಯ ನೀಡಲಾಗುವುದು ಎಂದು ವೈಷ್ಣವ್ ಹೇಳಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ, ಪಂಜಾಬ್ ಪೊಲೀಸರು (Punjab Police) ನಕಲಿ ಗುರುತಿನ ಮೂಲಕ ಸಕ್ರಿಯಗೊಂಡ 1.8 ಲಕ್ಷ ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಿದ್ದರು. ಈ ಸಿಮ್ ಕಾರ್ಡ್‌ಗಳನ್ನು ನೀಡಿದ್ದಕ್ಕಾಗಿ 17 ಜನರನ್ನು ಬಂಧಿಸಿದ್ದರು. ಬಹುತೇಕ ಸೈಬರ್ ಅಪರಾಧಗಳು ಮತ್ತು ‘ದೇಶವಿರೋಧಿ’ ಕೃತ್ಯಗಳನ್ನು ಸುಳ್ಳು ದಾಖಲೆಗಳೊಂದಿಗೆ ಜೋಡಿಸಲಾದ ಮೊಬೈಲ್ ಸಂಖ್ಯೆಗಳನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಈ ಕ್ರಮ ಕೈಗೊಂಡಿದೆ.
Web Stories