ನವದೆಹಲಿ: ರಸಗೊಬ್ಬರಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಕೇಂದ್ರ ದೊಡ್ಡಮಟ್ಟದಲ್ಲಿ ಹೆಚ್ಚಿಸಿದೆ.
ಕೇಂದ್ರ ರಸಗೊಬ್ಬರ ಖಾತೆಯ ಸಚಿವ ಮಾನ್ಸುಖ್ ಮಾಂಡವೀಯ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ಬೆಲೆ ಹೆಚ್ಚಾಗಿದ್ದರೂ ಹಳೆಯ ದರಕ್ಕೆ ರೈತರಿಗೆ ಸಿಗುವಂತೆ ಮಾಡಲು ಕೇಂದ್ರ ಸಬ್ಸಿಡಿ ಪ್ರಮಾಣವನ್ನು ಹೆಚ್ಚಳ ಮಾಡಿದೆ. ರಸಗೊಬ್ಬರ ಸಬ್ಸಿಡಿಗಾಗಿ ಕೇಂದ್ರ ಸರ್ಕಾರ 28 ಸಾವಿರ ಕೋಟಿ ರೂ.ಮೀಸಲಿರಿಸಿದೆ ಎಂದು ತಿಳಿಸಿದರು.
ಒಂದು ಚೀಲ ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಇದುವರೆಗೂ ಇದ್ದ 1,200 ರೂ. ಸಬ್ಸಿಡಿಯನ್ನು 1,650 ರೂಪಾಯಿಗೆ ಹೆಚ್ಚಿಸಿದೆ. ಯೂರಿಯಾ ಸಬ್ಸಿಡಿಯನ್ನು 1,500 ರೂ. ನಿಂದ 2,000 ರೂ. ಗೆ ಹೆಚ್ಚಿಸಿದೆ. ಇದನ್ನೂ ಓದಿ: ಡಿಎಪಿ ಗೊಬ್ಬರ ಸಬ್ಸಿಡಿ ಪ್ರಮಾಣ ಶೇ.140 ಏರಿಕೆ – ಕೇಂದ್ರದಿಂದ ಐತಿಹಾಸಿಕ ನಿರ್ಧಾರ
ನೈಟ್ರೋಜನ್ ಪಾಸ್ಪರಸ್ ಪೊಟ್ಯಾಶಿಯಂ(ಎನ್‍ಪಿಕೆ) ಮೇಲಿನ ಸಬ್ಸಿಡಿಯನ್ನು 900 ರೂ. ನಿಂದ 1,015 ರೂ.ಗೆ ಏರಿಕೆ ಮಾಡಿದೆ. ಸಿಂಗಲ್ ಸೂಪರ್ ಫಾಸ್ಫೇಟ್(ಎಸ್‌ಎಸ್‌ಪಿ) ಮೇಲಿನ 315 ರೂ.ಗಳ ಸಬ್ಸಿಡಿಯನ್ನು 375 ರೂ.ಗೆ ಹೆಚ್ಚಳ ಮಾಡಿದೆ.
ಕಳೆದ ವರ್ಷ ಒಂದು ಚೀಲ ಡಿಎಪಿ ಗೊಬ್ಬರಕ್ಕೆ ಕಂಪನಿಗಳು 1,700 ರೂ. ದರವನ್ನು ನಿಗದಿಪಡಿಸಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ 500 ರೂ. ಸಬ್ಸಿಡಿ ನೀಡಿತ್ತು. ಹೀಗಾಗಿ ಒಂದು ಚೀಲ ಗೊಬ್ಬರವನ್ನು ರೈತರು 1,200 ರೂ. ದರದಲ್ಲಿ ಖರೀದಿಸುತ್ತಿದ್ದರು.
ಡಿಎಪಿಗೆ ಬಳಸಲಾಗುವ ಫಾಸ್ಪರಿಕ್ ಆಸಿಡ್, ಅಮೋನಿಯಾ ಇತ್ಯಾದಿಗಳ ಅಂತರರಾಷ್ಟ್ರೀಯ ಬೆಲೆಗಳು ಇತ್ತೀಚಿಗೆ ಶೇ.60 ರಿಂದ ಶೇ.70 ರಷ್ಟು ಏರಿಕೆ ಕಂಡಿದೆ. ಈ ಕಾರಣಕ್ಕೆ ಭಾರತದಲ್ಲೂ ಗೊಬ್ಬರಗಳ ಬೆಲೆ ಭಾರೀ ಏರಿಕೆ ಆಗುತ್ತಿವೆ.