ವಲಸಿಗರ ಆಧಾರ್‌ ನಿಷ್ಕ್ರಿಯ – ಏನಿದು ಪಶ್ಚಿಮ ಬಂಗಾಳ, ಕೇಂದ್ರದ ನಡುವಿನ ಕಿತ್ತಾಟ?

Public TV
3 Min Read
West Bengal 2

ಶ್ಚಿಮ ಬಂಗಾಳದಲ್ಲಿ  (West Bengal) ರಾಜಕೀಯ ಉದ್ದೇಶಕ್ಕೆ ಬಾಂಗ್ಲಾ ವಲಸಿಗರಿಗೆ ಆಧಾರ್ ಕಾರ್ಡ್ (Aadhaar Card) ನೀಡಿರುವ ಆರೋಪದ ಮೇಲೆ ಕೇಂದ್ರ ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಹಲವರ ಆಧಾರ್ ನಿಷ್ಕ್ರಿಯಗೊಳಿಸಲಾಗಿದ್ದು, ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಸರ್ಕಾರದ ನಡುವಿನ ರಾಜಕೀಯ ಕೆಸರೆರಚಾಟಕ್ಕೆ ರಾಜ್ಯ ಸಾಕ್ಷಿಯಾಗಿದೆ.  

ಕೇಂದ್ರದ ನಿರ್ಧಾರದ ವಿರುದ್ಧ ಗುಡುಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಆಧಾರ್ ನಿಷ್ಕ್ರಿಯಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈಗ ಅಗತ್ಯ ಸೇವೆಗಳಿಗೆ ಆಧಾರ್ ಕಡ್ಡಾಯವಾಗಿ ಬೇಕಾಗಿದ್ದು, ನಿಷ್ಕ್ರಿಯಗೊಳಿಸಲಾದ ಆಧಾರ್ ಕಾರ್ಡ್‍ಗಳ ವಿಚಾರವಾಗಿ ಮಮತಾ ಬ್ಯಾನರ್ಜಿ ಕೇಂದ್ರಕ್ಕೆ ಪತ್ರ ಸಹ ಬರೆದಿದ್ದಾರೆ. ಇದರೊಂದಿಗೆ, ನಮಗೆ ಆಧಾರ್ ಅಗತ್ಯವಿಲ್ಲ, ನಾವು ಪ್ರತ್ಯೇಕ ಗುರುತಿನ ಚೀಟಿ ಜಾರಿಗೆ ತರುತ್ತೇವೆ ಎಂಬ ಸವಾಲನ್ನು ಸಹ ಕೆಂದ್ರಕ್ಕೆ ಹಾಕಿದ್ದಾರೆ.

West Bengal

ಟಿಎಂಸಿ (TMC) ಸಂಸದ ಸಾಕೇತ್ ಗೋಕಲೆ (Saket Gokhale) ಕೂಡ ಈ ವಿಚಾರವಾಗಿ ಮೋದಿ (Narendra Modi) ಸರ್ಕಾರ ಜನಸಾಮಾನ್ಯರ ಹಕ್ಕನ್ನು ಕಸಿಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ನೀವು ಭಾರತದಲ್ಲಿ ಎಲ್ಲಿಯೇ ವಾಸಿಸುತ್ತಿರಲಿ, ಬಿಜೆಪಿಯನ್ನು ವಿರೋಧಿಸುವ ಕಾರಣಕ್ಕಾಗಿ ಮೋದಿ ಸರ್ಕಾರ ನಿಮ್ಮ ಆಧಾರ್ ಅನ್ನು ನಿಷ್ಕ್ರಿಯಗೊಳಿಸಿದರೆ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.

ಆಧಾರ್ ನಿಷ್ಕ್ರಿಯದಿಂದ ಎದುರಿಸಬೇಕಾದ ಸಮಸ್ಯೆಗಳು: ಆಧಾರ್ ಅಗತ್ಯವಿರುವ ಎಲ್ಲಾ ಸೇವೆಗಳು ಲಭ್ಯವಾಗುವುದಿಲ್ಲ. ವಿಶೇಷವಾಗಿ  ಸರ್ಕಾರದಿಂದ ಸಿಗುವ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು ಲಭ್ಯವಿರುವುದಿಲ್ಲ.

ಕೇಂದ್ರ ಹೇಳಿದ್ದೇನು?: ಕೇಂದ್ರ ಸಚಿವ ಶಾಂತನು ಠಾಕೂರ್ ಅವರು ತಾಂತ್ರಿಕ ದೋಷದಿಂದ ಪಶ್ಚಿಮ ಬಂಗಾಳದ ನಿವಾಸಿಗಳ ಆಧಾರ್ ಕಾರ್ಡ್‍ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

West Bengal 1

ಟಿಎಂಸಿ ಸಂಸದರ ತಾಜಾ ಆರೋಪಗಳು ಆಧಾರ್ ಕಾರ್ಡ್‍ಗಳ ಮೂಲಕ ಸಾಮಾನ್ಯ ಜನರ ವೈಯಕ್ತಿಕ ಡೇಟಾದ ಆಪಾದನೆಯ ಉಲ್ಲಂಘನೆಯ ಸುತ್ತ ಚರ್ಚೆಗೆ ಮತ್ತೆ ಮರುಜೀವ ಬಂದಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಮೆರಿಕ ಮೂಲದ `ರೆಸೆಕ್ಯುರಿಟಿ’ ಸಂಸ್ಥೆಯು ಡಾರ್ಕ್ ವೆಬ್‍ನಲ್ಲಿ ಆಧಾರ್ ಸಂಖ್ಯೆಗಳು ಮತ್ತು ಪಾಸ್‍ಪೋರ್ಟ್ ವಿವರಗಳು ಸೇರಿದಂತೆ ಸುಮಾರು 81.5 ಕೋಟಿ ಭಾರತೀಯರ ವೈಯಕ್ತಿಕ ಡೇಟಾ ಸೋರಿಕೆಯಾಗಿದೆ ಎಂದು ವರದಿ ಮಾಡಿತ್ತು. ವರದಿಯ ನಂತರ, ದೆಹಲಿ ಪೊಲೀಸರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಡಾರ್ಕ್ ವೆಬ್‍ನಲ್ಲಿ ಜನರ ವೈಯಕ್ತಿಕ ಡೇಟಾವನ್ನು ಸೋರಿಕೆ ಮಾಡಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಅಕ್ರಮ ಆಧಾರ್‌ನ್ನು ನಿಷ್ಕ್ರಿಯಗೊಳಿಸಿದ್ದರೆ ಅಥವಾ ರದ್ದುಗೊಳಿಸದಿದ್ದರೆ ಆಗುವ ಸಮಸ್ಯೆಗಳೇನು? ಇದರ ಪರಿಣಾಮಗಳೇನು? ಅಲ್ಲದೇ ಪ್ರತ್ಯೇಕ ಐಡಿ ಕಾರ್ಡ್ ದೇಶದ ಭದ್ರತೆಗೆ ಹೇಗೆ ತೊಡಕಾಗಬಹುದು ಎಂಬ ಪ್ರಶ್ನೆ ಈಗ ದೇಶದೆಲ್ಲೆಡೆ ಸಂಚಲನ ಮೂಡಿಸಿದೆ. 

ಕೇಂದ್ರ ಸರ್ಕಾರ ಹಾಗೂ ಸ್ವಯತ್ತ ಸಂಸ್ಥೆಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಗುರುತಿನ ಚೀಟಿ ನೀಡಲು ಅಧಿಕಾರ ಇಲ್ಲ. ಇದೀಗ ಮಮತಾ ಸರ್ಕಾರ ಗುರುತಿನ ಚೀಟಿ ನೀಡಲು ಮುಂದಾಗಿದ್ದು, ರಾಜಕೀಯ ಕಾರಣ, ಮತದ ಆಸರೆಗೆ ಎಂಬ ಆರೋಪಗಳು ಸಹ ಕೇಳಿಬರುತ್ತಿದೆ. ದೇಶಕ್ಕೆ ಅಕ್ರಮವಾಗಿ ನುಸುಳಿ ಬಂದ ಬಾಂಗ್ಲಾ ಇನ್ನಿತರ ದೇಶಗಳ ಜನರಿಗೆ ಆಧಾರ್ ಅಥವಾ ಗುರುತಿನ ಚೀಟಿ ನೀಡುವುದು ಮುಂದೆ ದೇಶಕ್ಕೆ ಮಾರಕವಾಗಿ ಪರಿಣಮಿಸಲಿದೆ.  ಮೂಲ ನಿವಾಸಿಗಳು ಪರಕೀಯರಾಗಿ ಬದುಕಬೇಕಾದ ಸಮಯ ದೂರ ಇಲ್ಲ ಎಂಬ ಚರ್ಚೆ ಕೂಡ ಜನರಲ್ಲಿ ಆರಂಭವಾಗಿದೆ. 

ಕೆಲವೆಡೆ ಆಧಾರ್ ನಿಷ್ಕ್ರಿಯಗೊಳಿಸುತ್ತಿರುವುದು ಎನ್‍ಆರ್‌ಸಿ (NRC) ಜಾರಿಯ ಮೊದಲ ಹೆಜ್ಜೆ ಎಂಬ ಮಾತಗಳು ಕೇಳಿಬಂದಿದ್ದು, ಕೇಂದ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ಸೂಕ್ತ ನಿರ್ಧಾರ ಹಾಗೂ ಮಾತುಕತೆ ಮೂಲಕ ಚರ್ಚೆಗೆ ಗ್ರಾಸವಾದ ವಿಚಾರಕ್ಕೆ ಅಂತ್ಯ ಹಾಡಬೇಕಿದೆ. 

Share This Article