ನವದೆಹಲಿ: ದೆಹಲಿ ವಿಮಾನ ನಿಲ್ದಾಣದ ರನ್‌ವೇ 10ರ ಕಡೆಗೆ ಜಿಪಿಎಸ್ ಆಧಾರಿತ ಲ್ಯಾಂಡಿಂಗ್ ವಿಧಾನದಲ್ಲಿ ಬರುತ್ತಿರುವ ಕೆಲವು ವಿಮಾನಗಳು ಜಿಪಿಎಸ್ ಸ್ಪೂಫಿಂಗ್‌ಗೆ (GPS Spoofing) ಒಳಗಾಗಿವೆ. ಈ ವಿಮಾನಗಳಿಗೆ ತುರ್ತು ಪರಿಸ್ಥಿತಿ ಕಾರ್ಯವಿಧಾನಗಳನ್ನು ಬಳಸಲಾಗಿದೆ. ಆದರೆ ಇತರ ರನ್‌ವೇಗಳಲ್ಲಿ ಸಾಂಪ್ರದಾಯಿಕ ನ್ಯಾವಿಗೇಷನ್ ಸೌಲಭ್ಯಗಳು ಕಾರ್ಯನಿರ್ವಹಿಸುತ್ತಿರುವುದರಿಂದ ವಿಮಾನಗಳ ಚಲನೆಯ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ ಎಂದು ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು (Ram Mohan Naidu) ಸ್ಪಷ್ಟಪಡಿಸಿದ್ದಾರೆ.
ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport) ಉಂಟಾಗುತ್ತಿರುವ ಜಿಪಿಎಸ್ ಸ್ಪೂಫಿಂಗ್ ಸಮಸ್ಯೆಯ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ರಾಜ್ಯಸಭೆಯಲ್ಲಿ ಉತ್ತರ ನೀಡಿದರು. ಇದನ್ನೂ ಓದಿ: ಪ್ರತಾಪ್ ಸಿಂಹ, ಯತ್ನಾಳ್ ವಿರುದ್ಧ ಅವಾಚ್ಯ ಶಬ್ದ ಬಳಕೆ ಆರೋಪ – ಎಸ್‌ಡಿಪಿಐ ಮುಖಂಡನ ವಿರುದ್ಧ FIR
ಈ ಸಮಸ್ಯೆಯನ್ನು ಎದುರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಐಜಿಐ ವಿಮಾನ ನಿಲ್ದಾಣದ ಸುತ್ತಮುತ್ತ ಜಿಪಿಎಸ್ ಸ್ಪೂಫಿಂಗ್/ ಜಿಎನ್‌ಎಸ್‌ಎಸ್ (ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್) ತೊಂದರೆಗಳ ತಕ್ಷಣದ ವರದಿ ಮಾಡುವ ಉದ್ದೇಶದಿಂದ ನ.10ರಂದು ಪ್ರಮಾಣಿತ ಕಾರ್ಯವಿಧಾನ ಬಿಡುಗಡೆ ಮಾಡಲಾಗಿದೆ. ವಿಮಾನ ನಿಲ್ದಾಣಗಳ ಪ್ರಾಧಿಕಾರ ವೈರ್‌ಲೆಸ್ ಮಾನಿಟರಿಂಗ್ ಸಂಸ್ಥೆಯನ್ನು ಸಂಪರ್ಕಿಸಿ ತೊಂದರೆಯ ಮೂಲವನ್ನು ಪತ್ತೆಹಚ್ಚುವಂತೆ ಕೋರಿದೆ ಎಂದು ತಿಳಿಸಿದರು. ಇದನ್ನೂ ಓದಿ: ಈ ವರ್ಷದಲ್ಲೇ ಕಡಿಮೆ, ನವೆಂಬರ್‌ನಲ್ಲಿ 1.7 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಯಾವ ರಾಜ್ಯದ ಪಾಲು ಎಷ್ಟು?
ಜಾಗತಿಕವಾಗಿ ಮಧ್ಯಪ್ರಾಚ್ಯ ಮತ್ತು ಕೆಲವು ಏಷ್ಯಾದ ಭಾಗಗಳಲ್ಲಿ ಜಿಪಿಎಸ್ ಸ್ಪೂಫಿಂಗ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲೂ ಈ ರೀತಿ ತೊಂದರೆ ಕಾಣಿಸಿಕೊಂಡಿದೆ. ಕೋಲ್ಕತ್ತಾ, ಅಮೃತಸರ, ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ವಿಮಾನ ನಿಲ್ದಾಣಗಳಿಂದಲೂ ಇದೇ ರೀತಿಯ ಘಟನೆಗಳು ವರದಿಯಾಗಿವೆ. ಆದರೆ ತಾಂತ್ರಿಕ ಮತ್ತು ಭದ್ರತಾ ಕ್ರಮಗಳಿಂದಾಗಿ ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಅಪಾಯವಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ನಟೋರಿಯಸ್ ಟ್ರಾಫಿಕ್ ಇದೆ: ರಾಜೀವ್ ರೈ
ಏನಿದು ಜಿಪಿಎಸ್ ಸ್ಪೂಫಿಂಗ್?
ಇದು ಒಂದು ಬಗೆಯ ಸೈಬರ್ ದಾಳಿಯಾಗಿದ್ದು, ನಕಲಿ ಉಪಗ್ರಹ ಸಂಕೇತಗಳನ್ನು ಉದ್ದೇಶಪೂರ್ವಕವಾಗಿ ವಿಮಾನಗಳಿಗೆ ರವಾನಿಸಲಾಗುತ್ತದೆ. ಈ ನಕಲಿ ಸಂಕೇತಗಳು ವಿಮಾನದ ದಿಕ್ಕೂಚಿ ವ್ಯವಸ್ಥೆಗಳನ್ನು ದಿಕ್ಕು ತಪ್ಪಿಸುತ್ತವೆ ಅಂದರೆ ವಿಮಾನಕ್ಕೆ ಅದರ ನಿಜವಾದ ಸ್ಥಳ, ವೇಗ ಅಥವಾ ಸಮಯದ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತವೆ. ಇದು ವಿಮಾನವು ದಾರಿತಪ್ಪಿ ಬೇರೆಡೆ ಸಾಗಲು ಕಾರಣವಾಗುವ ಸಾಧ್ಯತೆಯಿರುತ್ತದೆ.


