DistrictsKarnatakaKodaguLatestMain Post

ಕೊಡಗಿನ ಮಳೆ ಹಾನಿ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ, ಪರಿಶೀಲನೆ

ಮಡಿಕೇರಿ: ಮುಂಗಾರು ಮಳೆಯಿಂದ ಆಗಿರುವ ಹಾನಿ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ತಂಡ ಕೊಡಗು(Kodagu) ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸಿದೆ.

ಮಡಿಕೇರಿ(Madikeri) ತಾಲೂಕಿನ ಸೀಮೆಹುಲ್ಲು ಕಜೆ ಬಳಿ ಉಂಟಾಗಿರುವ ಭೂಕುಸಿತ, ಕಾಫಿ ಬೆಳೆ ಹಾನಿ, ಮದೆನಾಡು ಬಳಿಯ ಕರ್ತೋಜಿ ಹೆದ್ದಾರಿ, ಕೊಯನಾಡು ಶಾಲೆ ಬಳಿ ಭೂಕುಸಿತ ಹಾಗೂ ಕಿಂಡಿ ಆಣೆಕಟ್ಟು ಪ್ರದೇಶವನ್ನು ಬುಧವಾರ ವೀಕ್ಷಿಸಿದ್ದಾರೆ.

ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಆಶೀಸ್ ಕುಮಾರ್ ನೇತೃತ್ವದ ತಂಡದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಉಪ ನಿರ್ದೇಶಕಾರಾದ ಮಹೇಶ್ ಕುಮಾರ್, ಕೇಂದ್ರ ಇಂಧನ ಸಚಿವಾಲಯದ ಸಹಾಯಕ ನಿರ್ದೇಶಕರಾದ ಭವ್ಯ ಪಾಂಡೆ ತಂಡವು ಜಿಲ್ಲೆಯ ಭೂಕೂಸಿತ, ಬೆಳೆ ಹಾನಿ ಹಾಗೂ ಪ್ರವಾಹ ಪೀಡಿತ ಪ್ರದೇಶವನ್ನು ವೀಕ್ಷಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಂದ ಮಾಹಿತಿ ಪಡೆದರು. ಇದನ್ನೂ ಓದಿ: ಮಹಾ ಮಳೆಗೆ ವ್ಯಂಗ್ಯ – #LeaveBengaluru ಅಭಿಯಾನ ಆರಂಭಿಸಿದ ಕನ್ನಡಿಗರು

ಡಾ.ಬಿ.ಸಿ.ಸತೀಶ್ ಅವರು ಸೀಮೆಹುಲ್ಲು ಕಜೆ ಬಳಿ ಬರೆ ಕುಸಿತ, ಕಾಫಿ ಬೆಳೆಹಾನಿ, ಕೊಯಿನಾಡು ಶಾಲೆ ಬಳಿಯ ಭೂಕೂಸಿತ, ಕಿಂಡಿ ಆಣೆಕಟ್ಟು ಪ್ರದೇಶದಲ್ಲಿ ಪ್ರವಾಹ ಮತ್ತಿತರ ಬಗ್ಗೆ ಅಧ್ಯಯನ ಕೇಂದ್ರ ತಂಡಕ್ಕೆ ಸವಿವರವಾಗಿ ಮಾಹಿತಿ ನೀಡಿದರು.


ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಮನೋಜ್ ರಾಜನ್ ಅವರು ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಭೂಕುಸಿತ, ಬೆಳೆಹಾನಿ ಹಾಗೂ ಪ್ರವಾಹದಿಂದಾಗಿ ಸಾಕಷ್ಟು ನಷ್ಟ ಉಂಟಾಗಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರಂತೆ ಮಳೆಹಾನಿ ಅಧ್ಯಯನ ಕೇಂದ್ರ ತಂಡವು ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ವಿಕ್ಷಣೆ ಕೈಗೊಂಡಿದೆ ಎಂದರು.

ಕೇಂದ್ರದಿಂದ 3 ತಂಡ ಆಗಮಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಅಧ್ಯಯನ ಕೇಂದ್ರ ತಂಡವು ಮಳೆ ಹಾನಿ ಸಂಬಂಧ ಚರ್ಚಿಸಿದ್ದಾರೆ ಎಂದು ಮನೋಜ್ ರಾಜನ್ ತಿಳಿಸಿದರು.

Live Tv

Leave a Reply

Your email address will not be published.

Back to top button