ಪಾಕ್ ಜೊತೆ ಯುದ್ಧ ಮಾಡಲು ಕೇಂದ್ರ ಸಂಚು ರೂಪಿಸಿದೆ: ಶಿವಶಂಕರ ರೆಡ್ಡಿ

Public TV
1 Min Read
shivashankara reddy

ಚಿಕ್ಕಬಳ್ಳಾಪುರ: ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಮಾಜಿ ಸಚಿವ ಎನ್.ಎಚ್ ಶಿವಶಂಕರ ರೆಡ್ಡಿ ಟೀಕೆ ಮಾಡಿದ್ದಾರೆ. ಪಾಕ್ ಜೊತೆ ಯುದ್ಧ ಮಾಡಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಕಿಡಿಕಾರಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿ ನೀತಿ ತಾಳುತ್ತಿದೆ. ದೇಶದಲ್ಲಿ ಯುದ್ಧದ ಭೀತಿ ಸೃಷ್ಟಿ ಮಾಡಿ, ಅಶಾಂತಿಯ ವಾತಾವರಣ ನಿರ್ಮಾಣ ಮಾಡುವ ಯತ್ನ ನಡೆಸಿದೆ. ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಸಲುವಾಗಿ ಈ ಸಂಚು ರೂಪಿಸಿದೆ. ಕೇಂದ್ರ ಸರ್ಕಾರದ ಈ ನಡೆ ಬಹಳ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರದ ನಿರ್ಧಾರದಿಂದ ಪ್ರತ್ಯೇಕವಾದಿಗಳ ಕೂಗು ಮತ್ತಷ್ಟು ಜೋರಾಗಲಿದೆ. ಉಗ್ರವಾದಿ ಸಂಘಟನೆಗಳ ಕೃತ್ಯಗಳು ಜಾಸ್ತಿ ಆಗಬಹುದು. ವಿಶೇಷ ಸ್ಥಾನಮಾನ ಇದ್ದ ಕಾರಣ ದೇಶದಲ್ಲಿ ರಕ್ಷಣೆ ಇತ್ತು. ಈಗ ವಿಶೇಷ ಸ್ಥಾನಮಾನ ತೆಗೆದಿರುವುದರಿಂದ ಉಳಿದವರು ಕೂಡ ಉಗ್ರರ ಜೊತೆ ಸೇರಿ ಪಾಕಿಸ್ತಾನಕ್ಕೆ ನಾವು ಸೇರಬೇಕೆಂಬ ಕೂಗು ಜೋರಾಗಲಿದೆ. ಇದು ದೇಶ ವಿರೋಧಿ ನೀತಿ ಎಂದು ಶಿವಶಂಕರ ರೆಡ್ಡಿ ಬಣ್ಣಿಸಿದರು.

ಕೇಂದ್ರ ಸರ್ಕಾರ ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಜಮ್ಮು-ಕಾಶ್ಮೀರ ಕೇಂದ್ರದ ಅಧೀನಕ್ಕೆ ಒಳಪಡಲಿದೆ. ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ಒಳಗೊಂಡಿದ್ದರೂ ಕೇಂದ್ರದ ಅಧೀನದಲ್ಲಿ ಬರಲಿದೆ. ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಲಿದೆ. ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ರದ್ದುಗೊಳಿಸಲಾಗಿದೆ.

ರಾಜ್ಯಸಭೆಯಲ್ಲಿ ಕೇಂದ್ರಗೃಹ ಸಚಿವ ಅಮಿತ್ ಶಾ ಪರಿಚ್ಛೇಧ 370 ಮತ್ತು 35(ಎ) ರದ್ದುಗೊಳಿಸಲಾಗುವುದು ಎಂದು ಹೇಳುತ್ತಿದ್ದಂತೆಯೇ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿ ಗಲಾಟೆ ಆರಂಭಿಸಿದರು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ, ಅಧಿಕಾರ ರದ್ದುಗೊಳಿಸಿದ ಆದೇಶಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *