– ‘ಕೈ’ ನಾಯಕರಿಂದ ಜನರ ನಡುವೆ ಸಿಎಎ ಗೊಂದಲ ಸೃಷ್ಟಿ
ಉಡುಪಿ: ಕಾಂಗ್ರೆಸ್ ದೇಶದ ರಿಜೆಕ್ಟೆಡ್ ಗೂಡ್ಸ್. ವಿಪಕ್ಷ ಸ್ಥಾನಮಾನ ಪಡೆಯುವ ತಾಕತ್ ಇಲ್ಲದ ಪಕ್ಷ ಅದು. ರಾಜ್ಯಸಭೆಯಲ್ಲಿ ಸಂಖ್ಯಾಬಲ ಇಲ್ಲದಿದ್ದರೂ ಪೌರತ್ವ ತಿದ್ದುಪಡೆ ಕಾಯ್ದೆ ಪಾಸ್ ಆಗಿದೆ ಎಂದು ಕೇಂದ್ರ ರಸಗೊಬ್ಬರ ಸಚಿವ ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.
ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ಕೇಂದ್ರ ಸಚಿವರು ನವಗ್ರಹ ಕಿಂಡಿ ಮೂಲಕ ಕೃಷ್ಣದರ್ಶನ ಪಡೆದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‍ಗೆ ದೇಶದಲ್ಲಿ ಕೆಲಸ ಇಲ್ಲ. ಜನರ ನಡುವೆ ಗೊಂದಲ ಸೃಷ್ಟಿ ಮಾಡುವುನ್ನೇ ಉದ್ಯೋಗ ಮಾಡಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಆಳವಾದ ಅಧ್ಯಯನ ಮಾಡದಿದ್ದರೆ ಸಿಎಎ ವಿಚಾರದಲ್ಲಿ ಗೊಂದಲ ಆಗುತ್ತದೆ. ದೇಶದ 130 ಕೋಟಿ ಜನಕ್ಕೆ ಕಾಯ್ದೆಯಿಂದ ತೊಂದರೆ ಆಗಲ್ಲ. ಕಾಂಗ್ರೆಸ್‍ಗೆ ಐದೂವರೆ ವರ್ಷ ವಿರೋಧಿಸಲು ಏನೂ ಸಿಗದೆ ಜನರ ನಡುವೆ ಗೊಂದಲ ತಂದಿಡುತ್ತಿದೆ. ರಾಜ್ಯಸಭೆಯಲ್ಲಿ ಸಂಖ್ಯಾಬಲ 99 ಇದ್ದರೂ 123 ಜನರ ಬೆಂಬಲ ಸಿಕ್ಕಿದೆ. ಲೋಕಸಭೆಯಲ್ಲಿ ಸಿಎಎಗೆ ಬಿಲ್ ಪಾಸಾಗಿದೆ ಎಂದು ಹೇಳಿದರು.
Advertisement
ಪಿಣರಾಯಿ ರಾಜೀನಾಮೆ ಕೊಡಲಿ:
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಿಎಎ ವಿಚಾರದಲ್ಲಿ ಸಣ್ಣತನ ಪ್ರದರ್ಶನ ಮಾಡಿದ್ದಾರೆ. ಅವರು ಸಿಎಂ ಆಗಿ ಮುಂದುವರಿಯಲು ಅರ್ಹರಲ್ಲ. ಕೇರಳದಲ್ಲಿ 3,000 ಜನ ವ್ಯಾಪಾರಿ, ಉದ್ಯೋಗಿಗಳ ಜೊತೆ ಸಿಎಎ ವಿಚಾರವಾಗಿ ಮಾತಡಿದ್ದೇನೆ. ಎಲ್ಲರಿಗೂ ಮನವರಿಕೆಯಾಗಿದೆ. ಸಿಎಂ ಪಿಣರಾಯಿ ಅವರಿಗೂ ಪ್ರತಿಕ್ರಿಯೆ ಕೊಟ್ಟು ಬಂದಿದ್ದೇನೆ ಎಂದರು.
Advertisement
ರಾಜ್ಯ ಕಾಂಗ್ರೆಸ್ ಏಳು ಹೋಳಾಗಿದೆ:
ರಾಜ್ಯ ಕಾಂಗ್ರೆಸ್ ಪಾರ್ಟಿ ಒಡೆದು ಹೋಗುತ್ತಿದೆ. ಧರ್ಮಾಧಾರಿತವಾಗಿ ಬಿಜೆಪಿ ದೇಶ ಒಡೆಯುತ್ತಿಲ್ಲ. ರಾಜ್ಯ ಕಾಂಗ್ರೆಸ್ ಏಳು ತಂಡಗಳಾಗಿ ಒಡೆದುಹೋಗಿದೆ. ದಿನೇಶ್ ಗುಂಡುರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಈಶ್ವರ್ ಖಂಡ್ರೆ, ಮಾಜಿ ಸಚಿವ ಡಿಕೆ ಶಿವಕುಮಾರ್, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್ ಅವರು ದೆಹಲಿ ಪ್ರವಾಸ ಮಾಡುತ್ತಾರೆ. ವಾರಕ್ಕೊಬ್ಬ ತಂಡ ತೆಗೆದುಕೊಂಡು ದೆಹಲಿಯಲ್ಲಿ ಇರುತ್ತಾರೆ ಎಂದು ಹೇಳಿದರು.