ಬೆಂಗಳೂರು: ಪದೇ ಪದೇ ಕರ್ನಾಟಕ ರಾಜ್ಯಕ್ಕೆ ತಾರತಮ್ಯ ಮಾಡಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈಗ ಮತ್ತೊಂದು ಮಹಾಮೋಸ ಮಾಡಲು ರೆಡಿಯಾಗ್ತಿದೆ. ರಾಜ್ಯಕ್ಕೆ ಅನ್ಯಾಯ ಆಗ್ತಿದ್ದರೂ ಮಹದಾಯಿ ವಿಚಾರದಲ್ಲಿ ಮೂಗು ತೂರಿಸದ ಕೇಂದ್ರ ಸರ್ಕಾರ ಇದೀಗ ಕಾವೇರಿ ವಿಚಾರವನ್ನು ಕೆದಕಿದೆ. ಕಾವೇರಿ ಕೊಳ್ಳದ ಜಲಾಶಯಗಳು ರಾಜ್ಯದ ಕೈತಪ್ಪುವ ಭೀತಿಯ ಬೆನ್ನಲ್ಲೇ ಮತ್ತೊಂದು ಹೊಡೆತಕ್ಕೂ ರಾಜ್ಯ ಸಿದ್ಧವಾಗಬೇಕಿದೆ. ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ವಿವಾದ ಬಗೆಹರಿಸಲು ಕೃಷ್ಣಾ-ಪಿನಾಕಿನಿ-ಕಾವೇರಿ ನದಿಗಳ ಜೋಡಣೆ ಪ್ಲಾನ್ ಮಾಡಿದೆ.
Advertisement
ಕೃಷ್ಣಾ-ಗೋದಾವರಿ ನದಿ ಜೋಡಣೆ ಮಾಡಿದ ಆಂಧ್ರ ಸರ್ಕಾರದಿಂದ ಉತ್ತೇಜಿತಗೊಂಡಿರುವ ಕೇಂದ್ರ ಸರ್ಕಾರ ಹೊಸ ನದಿ ಜೋಡಣೆ ಯೋಜನೆ ಕುರಿತು ಡಿಪಿಆರ್ ತಯಾರಿಸುವ ಹೊಣೆಯನ್ನು ಆಂಧ್ರ ಸರ್ಕಾರಕ್ಕೆ ವಹಿಸಿದೆ. ಈ ಯೋಜನೆಯಿಂದ ಕಾವೇರಿ ವಿವಾದ ಬಗೆಹರಿಯುವ ಆಶಾಕಿರಣ ಮೂಡಿದ್ರೂ ಕರ್ನಾಟಕಕ್ಕೆ ಮಾತ್ರ ಯಾವುದೇ ಉಪಯೋಗವಿಲ್ಲ. ಮಹಾನದಿ ಗೋದಾವರಿ ಕಣಿವೆಯಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಕೊರತೆ ಎದುರಿಸುತ್ತಿರುವ ಕೃಷ್ಣಾ, ಪಿನಾಕಿನ ಕಾವೇರಿ, ವೈಗೈ ಹಾಗೂ ಗುಂಡಾರ್ ವಲಯಗಳಿಗೆ ಹರಿಸುವುದು ಕೇಂದ್ರದ ಉದ್ದೇಶ. ಈ ಮೂಲಕ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಕಮಲ ಅರಳಿಸಲು ನರೇಂದ್ರ ಮೋದಿ ಸರ್ಕಾರ ಪ್ಲಾನ್ ಮಾಡಿದೆಯಾ ಅನ್ನೋ ಅನುಮಾನ ಕಾಡ್ತಿದೆ. ಇನ್ನು ವಿಜಯಪುರದ ಆಲಮಟ್ಟಿಯಿಂದ ಕೃಷ್ಣಾ ನದಿಯನ್ನು ತಿರುಗಿಸಿ ಆಂಧ್ರದ ಬರಪೀಡಿತ ಅನಂತಪುರ ಜಿಲ್ಲೆಗೆ ನೀರು ನೀಡುವ ಆಲೋಚನೆಯನ್ನು ಹೊಂದಲಾಗಿದೆ.
Advertisement
Advertisement
ಕರ್ನಾಟಕದಲ್ಲೂ ಸಾಕಷ್ಟು ಬರಪೀಡಿತ ಪ್ರದೇಶಗಳು ಇವೆ. ಆದ್ರೆ ಕೃಷ್ಣಾ ನದಿ ಮೂಲಕ ಆ ಭಾಗಗಳಿಗೆ ನೀರು ಕೊಡಿಸುವ ಪ್ರಯತ್ನವನ್ನೇ ಮಾಡಿಲ್ಲದಿರುವುದು ಬೇಸರದ ಸಂಗತಿಯಾಗಿದೆ. ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಮಾತ್ರ ಹನಿ ನೀರು ಸಿಗದಿದ್ದರೂ ಕೇಂದ್ರದ ಮಹಾ ಮೋಸ ರಾಜ್ಯ ಸರ್ಕಾರಕ್ಕೆ ಗೊತ್ತಿದೆಯಾ ಎಂಬ ಪ್ರಶ್ನೆಯೂ ಮೂಡುತ್ತಿದೆ. ಈ ಎಲ್ಲದರ ಮಧ್ಯೆ ರಾಜ್ಯದ ಬಿಜೆಪಿ ಸಂಸದರು ಹಾಗೂ ಜನಪ್ರತಿನಿಧಿಗಳು ಏನು ಮಾಡುತ್ತಾರೆ. ರಾಜ್ಯದ ಪರ ದನಿ ಎತ್ತುತ್ತಾರಾ ಅಥವಾ ಕೇಂದ್ರದ ಮೋದಿ ಸರ್ಕಾರದ ಯೋಜನೆ ಎಂಬ ಕಾರಣಕ್ಕೆ ಮೌನಕ್ಕೆ ಶರಣಾಗುತ್ತಾರಾ ಎನ್ನುವುದಷ್ಟೇ ಈಗ ಎಲ್ಲರಲ್ಲಿರುವ ಕುತೂಹಲ.
Advertisement