ಬೆಂಗಳೂರು: ಆ ಕರ್ನಾಟಕದ ಯೋಧ, ಉಗ್ರರ ಎದೆಯಲ್ಲಿ ಭಯ ಹುಟ್ಟಿಸಿದ್ದ. ಎದುರಾಳಿಗಳ ದಾಳಿಗೆ ಹೆದರದೆ, ಮೂವತ್ತಕ್ಕೂ ಹೆಚ್ಚು ಉಗ್ರರನ್ನ ಸದೆಬಡಿದು, ಕೊನೆಗೂ ತಾವು ಅಮರವಾಗಿದ್ದರು. ಕರ್ತವ್ಯದಲ್ಲಿ ಮೃತಪಟ್ಟಿದ್ದ ಆ ಯೋಧನಿಗೆ ಕೇಂದ್ರ ಸರ್ಕಾರ ಹುತಾತ್ಮ ಅಂತ ಪ್ರಮಾಣ ಪತ್ರ ನೀಡಬೇಕಿತ್ತು. ಆದ್ರೆ ಕೇಂದ್ರ ಸರ್ಕಾರ ನೀಡಿದ್ದು ಮಾತ್ರ ಬೇರೆಯದ್ದೇ ಸರ್ಟಿಫಿಕೇಟ್.
ಅಕ್ಟೋಬರ್ 20 ರಂದು ಮಣಿಪುರದ ಇಂಪಾಲ್ ನಲ್ಲಿ ನಮ್ಮ ರಾಜ್ಯದ ಬೆಳಗಾವಿ ಜಿಲ್ಲೆಯ ಯೋಧ ಉಮೇಶ್ ಎಂ ಹೆಳವರ್ ಉಗ್ರರ ಗ್ರಾನೈಟ್ ದಾಳಿಗೆ ಬಲಿಯಾಗಿದ್ರು. ಕರ್ತವ್ಯದಲ್ಲಿ ಮೃತಪಟ್ಟಿದ್ದ ಉಮೇಶ್ ಗೆ ಹುತಾತ್ಮ ಅಂತ ಸರ್ಟಿಫಿಕೇಟ್ ಕೊಡಬೇಕಿದ್ದ ಕೇಂದ್ರ ಗೃಹ ಇಲಾಖೆ, ಉಮೇಶ್ ಸಾವಿಗೆ ಲೇಟ್ ಡೆತ್ ಅಂತ ಸರ್ಟಿಫಿಕೇಟ್ ಕೊಟ್ಟಿದೆ. ಲೇಟ್ ಡೆತ್ ಅಂದ್ರೆ ಸಹಜ ಸಾವು ಎಂದರ್ಥ. ಕೇಂದ್ರ ಗೃಹ ಇಲಾಖೆ ಸಹಜ ಸಾವು ಅಂತ ಪ್ರಮಾಣ ಪತ್ರ ಕೊಟ್ರೆ, ಸಿಆರ್‍ಪಿಎಫ್‍ನ ಜನರಲ್ ಡೈರಕ್ಟರ್ ರಾಜೀವ್ ರಾಜ್ ಬಾಟ್ನಗರ್, ಶಹೀದ್ ಅಂತ ಪ್ರಮಾಣ ಪತ್ರ ನೀಡಿದ್ದಾರೆ. ಶಹೀದ್ ಅಂದ್ರೆ ಹುತಾತ್ಮ ಎಂದರ್ಥ. ಈ ಮೂಲಕ ಕೇಂದ್ರ ಗೃಹ ಇಲಾಖೆ ಎಡವಟ್ಟು ಮಾಡಿಕೊಂಡಿದೆ.
ದೇಶಕ್ಕಾಗಿ ಪ್ರಾಣಬಿಟ್ಟ ಉಮೇಶ್ ಕುಟುಂಬಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ಉಮೇಶ್ ಕುಟುಂಬ, ಮಗನನ್ನ ಕಳೆದುಕೊಂಡು ಅನಾಥವಾಗಿದೆ. ಇಷ್ಟಾದ್ರೂ ಅವ್ರ ಕುಟುಂಬಕ್ಕೆ ಯಾರು ಸ್ಪಂದಿಸದೇ ಇರೋದು ಬೇಸರದ ಸಂಗತಿ ಅಂತ ಮಾಜಿ ಯೋಧರ ಒಕ್ಕೂಟ ಅರಸೇನಾ ಪಡೆಯ ನಿವೃತ್ತ ಯೋಧರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದ ಭದ್ರತೆ, ರಕ್ಷಣೆಗಾಗಿ ಕರ್ತವ್ಯದಲ್ಲಿಯೇ ಮೃತಪಟ್ಟರೂ, ಕೇಂದ್ರ ಸರ್ಕಾರ ಮಾತ್ರ ಉಮೇಶ್ ಕುಟುಂಬಕ್ಕೆ, ಸಹಜ ಸಾವು ಅಂತ ಪ್ರಮಾಣ ಪತ್ರ ನೀಡಿರೋದು ಹಲವರ ಆಕ್ರೋಶಕ್ಕೆ ಗುರಿಯಾಗಿದೆ. ಕೇಂದ್ರದ ಈ ಎಡವಟ್ಟಿಗೆ ನಿವೃತ್ತ ಯೋಧರು ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮೃತ ಯೋಧ ಉಮೇಶ್ ಕುಟುಂಬಕ್ಕೆ ಸೂಕ್ತ ಸೌಲಭ್ಯಗಳು ಸಿಗದಿದ್ದರೆ ಪ್ರತಿಭಟನೆಗೆ ಇಳಿಯಬೇಕಾಗುತ್ತೆ ಅಂತ ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv