ಬೆಂಗಳೂರು: ಬೇರೆ ಎಲ್ಲ ತೀರ್ಮಾನಗಳನ್ನು ಅತ್ಯಂತ ವೇಗವಾಗಿ ತೆಗೆದುಕೊಳ್ಳುವ ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಹಾರ ಕಾಮಗಾರಿ ಬಗ್ಗೆ ತೀರ್ಮಾನ ಕೈಗೊಳ್ಳಲು ಯಾಕೆ ನಿಧಾನ ಧೋರಣೆ ಅನುಸರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಂಭವಿಸಿರುವ ಭೀಕರ ಪ್ರವಾಹದ ಕುರಿತು ಕೇಂದ್ರ ಸರ್ಕಾರ ಈ ವರೆಗೆ ಯಾವುದೇ ಘೋಷಣೆಗಳನ್ನು ಮಾಡಿಲ್ಲ. ಇದೇ ರೀತಿ ಮುಂದುವರಿದರೆ ನಾವು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತೇವೆ. ಪ್ರವಾಹದಿಂದ ಜನ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ಈ ಕುರಿತು ತಕ್ಷಣ ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ, ಈ ವರೆಗೆ ಕ್ರಮ ಕೈಗೊಂಡಿಲ್ಲ. ಯಾಕಿಷ್ಟು ತಾತ್ಸಾರ ಮನೋಭಾವನೆ ಎಂಬುದು ತಿಳಿಯುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
Advertisement
Advertisement
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಬಹುದು ಎಂದು ಭಾವಿಸಿದ್ದೆವು. ಹೀಗಾಗಿ ಯಾವುದೇ ರೀತಿಯ ಒತ್ತಡ ಹಾಕಲು ನಿರ್ಧರಿಸಿರಲಿಲ್ಲ. ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಮಿತ್ ಶಾ ಅವರು ರಾಜ್ಯಕ್ಕಾಗಮಿಸಿ ಪ್ರವಾಹ ಸ್ಥಿತಿಯ ವೈಮಾನಿಕ ಸಮೀಕ್ಷೆ ನಡೆಸಿದ ನಂತರವೂ ಸಹ ಯಾವುದೇ ಘೋಷಣೆ ಮಾಡಲಿಲ್ಲ, ಈ ಕುರಿತು ಹೇಳಿಕೆಯನ್ನೂ ನೀಡಲಿಲ್ಲ. ಹೀಗಿರುವಾಗ ಜನರು ಏನೆಂದು ಪರಿಭಾವಿಸಬೇಕು. ಕೇಂದ್ರ ಸರ್ಕಾರ ಎಲ್ಲವನ್ನೂ ಅರಿತು ಶೀಘ್ರ ಪರಿಹಾರವನ್ನು ಘೋಷಿಸಬೇಕು ಎಂದು ತಿಳಿಸಿದ್ದಾರೆ.
Advertisement
ರಾಜ್ಯದ ನೆರೆ ಬಗ್ಗೆ ಇಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಚರ್ಚೆಯೇ ಆಗಿಲ್ಲ. ರಾಜ್ಯದ ಸಚಿವರೂ ಕೂಡ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಿದ್ದರೂ ಯಾವುದೇ ಚಕಾರ ಎತ್ತಿಲ್ಲ. ರಾಜ್ಯಕ್ಕೆ ಪರಿಹಾರ ನೀಡುವ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿಲ್ಲ. ಆರಂಭದಲ್ಲಿ 5 ಸಾವಿರ ಕೋಟಿ ಬಿಡುಗಡೆ ಮಾಡುತ್ತಾರೆ ಎಂದು ಭಾವಿಸಿದ್ದೆವು. ಆದರೆ ಇಲ್ಲಿಯವರೆಗೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಹರಿಹಾಯ್ದಿದ್ದಾರೆ.
Advertisement
ಮೊನ್ನೆ ಅಮಿತ್ ಶಾ ಅವರು ಬಂದ್ರು,
ವೈಮಾನಿಕ ಸಮೀಕ್ಷೆ ಮಾಡಿ ಹೋದ್ರು.
ಇವತ್ತು ಕೇಂದ್ರದಲ್ಲಿ, ಸಚಿವ ಸಂಪುಟದ ಸಭೆ ಮಾಡಿ ನೆರವು ನೀಡುವುದರ ಬಗ್ಗೆ ಪ್ರಸ್ತಾವ ಮಾಡಿಲ್ಲ.
ರಾಜ್ಯದ ಜನರಿಗೆ ನಿರಾಸೆ ಮೂಡಿದೆ.
ಕೂಡಲೇ ೫ ಸಾವಿರ ಕೋಟಿ ನೆರೆವು ನೀಡಬೇಕು ಎಂದು ಆಗ್ರಹಿಸುತ್ತೇವೆ, ಇಲ್ಲದಿದ್ದಲ್ಲಿ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 13, 2019
ರಾಜ್ಯಾದ್ಯಂತ ಹೋರಾಟ ಮಾಡಲು ಯೋಜನೆ ರೂಪಿಸಿದ್ದೆವು. ಆದರೆ ಈ ಸಮಯದಲ್ಲಿ ಹೋರಾಟ ಮಾಡುವುದು ಸರಿಯಲ್ಲ ಎಂದು ಸುಮ್ಮನಿದ್ದೇವೆ. ಮುಂದಿನ ದಿನಗಳಲ್ಲಿ ಸರಿ ಹೋಗದಿದ್ದರೆ ಪ್ರತಿಭಟನೆ ಮಾಡಲೇ ಬೇಕಾಗುತ್ತದೆ. ಪರಿಹಾರ ಕೆಲಸಗಳು ಸಮರೋಪಾದಿಯಲ್ಲಿ ಸಾಗುತ್ತಿಲ್ಲ. ಇನ್ನೊಂದೆಡೆ ಚಿಕ್ಕಬಳ್ಳಾಪುರ, ಕೋಲಾರ ಸೇರಿ ಕೆಲವೆಡೆ ಭೀಕರ ಬರ ಇದೆ. ಈ ಜಿಲ್ಲೆಗಳಲ್ಲೂ ಬರ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇಷ್ಟಾದರೂ ಸಹ ಕೇಂದ್ರ ಸರ್ಕಾರ ತಾತ್ಸಾರ ಧೋರಣೆ ಅನುಸರಿಸುತ್ತಿದೆ ಎಂದು ತಿಳಿಸಿದರು.
ಬಾಲಚಂದ್ರ ಜಾರಕಿಹೊಳಿ ಸರ್ಕಾರ ಬೀಳಿಸುವ ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಹೇಳಿಕೆ ಈ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದರು.
ನಾಳೆ ಹೊಸಕೋಟೆಯಲ್ಲಿ ಅತೃಪ್ತ ಶಾಸಕರ ರಾಜಕೀಯ ದ್ರೋಹದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದ್ದೆವು. ಆದರೆ, ರಾಜ್ಯದಲ್ಲಿ ನೆರೆಯಿಂದಾಗಿ ಜನತೆ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಧಾವಿಸಬೇಕಿದೆ. ಹೀಗಾಗಿ ನಾಳೆಯ ಪ್ರತಿಭಟನೆಯನ್ನ ರದ್ದು ಮಾಡಿದ್ದೇವೆ. ನಾಳೆ ನೆರೆ ಪರಿಹಾರ ಕಮಿಟಿ ಮಾಡುತ್ತೇವೆ. ಹೀಗಾಗಿ ಕೆಲ ನಾಯಕರ ಸಭೆ ಕರೆದಿದ್ದು, ಚರ್ಚೆ ನಡೆಸಿ ಕಮಿಟಿ ರಚಿಸಲಾಗುವುದು ಎಂದು ತಿಳಿಸಿದರು.