2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ

Public TV
2 Min Read
MANGO 3

– ಮಾವು ಮಾರುಕಟ್ಟೆ ಮಧ್ಯಪ್ರವೇಶ; ಬೆಲೆ ವ್ಯತ್ಯಾಸ ಪಾವತಿಗೆ ಸರ್ಕಾರದ ಒಪ್ಪಿಗೆ: ಚಲುವರಾಯಸ್ವಾಮಿ

ಬೆಂಗಳೂರು: ನಿರಂತರ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಮಾವು ಬೆಳೆಗಾರರ ನೆರವಿಗೆ ಸರ್ಕಾರ ದಾವಿಸಿದೆ. ರಾಜ್ಯದಲ್ಲಿ ಮಾವಿನ‌ (Mangoes) ಬೆಲೆ ಕುಸಿತದ ಹಿನ್ನೆಲೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ನೆರವಾಗುವಂತೆ ರಾಜ್ಯ ಸರ್ಕಾರದ ಮನವಿಗೆ ಕೇಂದ್ರವೂ ಸಕಾರಾತ್ಮಕ ಸಮ್ಮತಿ ನೀಡಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರೆಡೂ ಪ್ರತಿ ಕೆ.ಜಿ.ಗೆ ಎರೆಡೆರೆಡು ರೂ. ಗಳಂತೆ ಒಟ್ಟು‌ 4 ರೂ. ವ್ಯತ್ಯಾಸ ಪಾವತಿಸಿ ಮಾರುಕಟ್ಟೆ ಚೈತನ್ಯಕ್ಕೆ ಕ್ರಮಕೈಗೊಳ್ಳಲು ಸಿದ್ಧತೆ ನಡೆಸಿವೆ. ಇಂದು ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ (Chaluvaraya Swamy) ವಿಡಿಯೋ‌ ಸಂವಾದದ ಮೂಲಕ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಾವು ಬೆಳೆಗಾರರ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: ಹೆಲ್ಪ್‌ಲೈನ್‌ ಹೆಸರಲ್ಲಿ ವಂಚನೆ ಆರೋಪ – ಬೆಂಗಳೂರಿನ ಸಂಧ್ಯಾ ಪವಿತ್ರ ವಿರುದ್ಧ ಎಫ್‌ಐಆರ್

chaluvaraya swamy scaled

2025-26ನೇ ಸಾಲಿನ ಮಾರುಕಟ್ಟೆ ಋತುವಿನಲ್ಲಿ ಮಾವಿಗೆ PDPS ಯೋಜನೆಯ ಅನುಷ್ಠಾನಕ್ಕೆ ಸಚಿವ ಚಲುವರಾಯಸ್ವಾಮಿ ಮಾಡಿದ ಮನವಿಗೆ ಕೇಂದ್ರ ಕೃಷಿ ಸಚಿವರೂ ಸಹ ಸಮ್ಮತಿ ನೀಡಿದರು.

2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸೋಮವಾರ ಈ‌ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆ ‌ಇದೆ. ಈ‌ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೃಷಿ ಮತ್ತು ತೋಟಗಾರಿಕೆ ಇಲಾಖೆ‌ ಅಧಿಕಾರಿಗಳು ಹಾಜರಿದ್ದರು. ಇದನ್ನೂ ಓದಿ: ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಶೀಘ್ರದಲ್ಲೇ ಸರ್ಕಾರಿ ಉದ್ಯೋಗ: ಸಚಿವ ವೆಂಕಟೇಶ್

ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲೊಂದಾಗಿದೆ. 2025-26ನೇ ಋತುವಿನಲ್ಲಿ 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ಬಾರಿ ಅಂದಾಜು 8 ರಿಂದ 10 ಲಕ್ಷ ಟನ್ ಮಾವು ಉತ್ಪಾದನೆಯಾಗಿದೆ. ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಪ್ರಮುಖ ಮಾವು ಬೆಳೆ ಪ್ರದೇಶಗಳಾಗಿವೆ. ಕರ್ನಾಟಕದಲ್ಲಿ, ಮಾವಿನ ಕೊಯ್ಲು ಮೇ ನಿಂದ ಜುಲೈ ವರೆಗೆ ನಡೆಯುತ್ತದೆ. ಈ ಅವಧಿಯಲ್ಲಿ, ಮಾರುಕಟ್ಟೆ ಬೆಲೆಗಳಲ್ಲಿ ಗಮನಾರ್ಹ ಏರಿಳಿತಗಳನ್ನು ಗಮನಿಸಲಾಗಿದೆ.

2025ರ ಮೇ ತಿಂಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣಿನ ಮಾದರಿ ಬೆಲೆಗಳು ಕ್ವಿಂಟಾಲ್‌ಗೆ 1,200 ರೂ. ನಿಂದ 2,500 ರೂ. ವರೆಗೆ ಇತ್ತು. ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ತೋತಾಪುರಿ ವರಿಟೆಯ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳು ಪ್ರತಿ ಕ್ವಿಂಟಾಲ್‌ಗೆ 450-550 ರೂ.ಗೆ ಕುಸಿದಿದೆ. ಕರ್ನಾಟಕ ಕೃಷಿ ಬೆಲೆ ಆಯೋಗವು ಮಾವಿನ A1 + FL ಕೃಷಿ ವೆಚ್ಚವನ್ನು ಕ್ವಿಂಟಲ್‌ಗೆ 3,460 ರೂ. ಮತ್ತು C-3 ವೆಚ್ಚಕ್ಕೆ 5,466 ರೂ. ಎಂದು ಶಿಫಾರಸು ಮಾಡಿದೆ. ಈ ನಿಟ್ಟಿನಲ್ಲಿ ಜೂ.11 ರಂದು ಭಾರತ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಯಿತು. ಜೂ.13 ರಂದು ಸ್ಪಷ್ಟೀಕರಣಗಳಿಗೆ ಉತ್ತರವನ್ನು ನೀಡಲಾಯಿತು. ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ಮಾವು ಅಭಿವೃದ್ಧಿ ಮಂಡಳಿಯನ್ನು PDPS ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ಸಂಸ್ಥೆಯಾಗಿ ಗೊತ್ತುಪಡಿಸಲಾಗಿದೆ.

Share This Article