– ಜಮಾತ್-ಇ-ಇಸ್ಲಾಂನ 70 ಪ್ರತ್ಯೇಕತಾವಾದಿಗಳ ಆಸ್ತಿ ಜಪ್ತಿ
ನವದೆಹಲಿ: ಪುಲ್ವಾಮ ದಾಳಿ ಮಾಡಿದ ಭಯೋತ್ಪಾದಕರಿಗೆ ಹಣ ನೀಡಿರುವ ಆರೋಪದ ಮೇಲೆ ಕಾಶ್ಮೀರದ 70 ಪ್ರತ್ಯೇಕತಾವಾದಿಗಳ ಆಸ್ತಿಗಳನ್ನು ಕೇಂದ್ರ ಸರ್ಕಾರ ಜಪ್ತಿ ಮಾಡಿದೆ. ಅಲ್ಲದೆ ಉಗ್ರರಿಗೆ ಬೆಂಬಲಿಸುವ ಎಲ್ಲಾ ಪ್ರತ್ಯೇಕವಾದಿಗಳ ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.
ಹೌದು, ಫೆ. 14ರಂದು ನಡೆದ ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಗೆ ಈ ಪ್ರತ್ಯೇಕತಾವಾದಿಗಳು ಹಣ ನೀಡಿದ್ದರು. ಅಲ್ಲದೆ ಭಾರತದಲ್ಲೇ ಇದ್ದುಕೊಂಡು ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಹಣವನ್ನು ನೀಡಿ ಬೆಂಬಲಿಸುತ್ತಿದ್ದರು ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಸೆಕ್ಷನ್ 42 ಸಂಬಂಧಿಸಿದಂತೆ ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆ ಅಡಿಯಲ್ಲಿ ಈ ಆದೇಶವನ್ನು ಮಾಡಲಾಗಿದೆ. ದಿನಕ್ಕೊಂದು ಶಾಕ್ ನೀಡುತ್ತಿರುವ ಸರ್ಕಾರದ ನಡೆಗೆ ಪ್ರತ್ಯೇಕತಾವಾದಿಗಳು ಇದೀಗ ಕಂಗಾಲಾಗಿದ್ದಾರೆ.
Advertisement
Advertisement
ಸೆಕ್ಷನ್ 42 ರ ಪ್ರಕಾರ, ಕೇಂದ್ರವು “ಸೆಕ್ಷನ್ 7, ಸೆಕ್ಷನ್ 8 ಈ ಎರಡು ಸೆಕ್ಷನ್ ಅಡಿಯಲ್ಲಿ ಬಳಸಿಕೊಳ್ಳಬಹುದಾದ ಎಲ್ಲಾ ಅಧಿಕಾರವನ್ನು ಪ್ರತಿನಿಧಿಸಬಹುದು”. ಸೆಕ್ಷನ್ 7ರಲ್ಲಿ ಕಾನೂನು ಬಾಹಿರ ಸಂಘದ ನಿಧಿ ಬಳಸುವುದನ್ನು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರವನ್ನು ನೀಡಲಾಗಿದೆ. ಹಾಗೆಯೇ ಸೆಕ್ಷನ್ 8ರ ಪ್ರಕಾರ ಕಾನೂನು ಬಾಹಿರ ಉದ್ದೇಶಕ್ಕಾಗಿ ಬಳಸಲಾಗುವ ಸ್ಥಳಗಳ ಮೇಲೆ ಕ್ರಮ ತೆಗೆದುಕೊಳ್ಳಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
Advertisement
ಸಂಘಟನೆ ನಿಷೇಧ:
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳಿಗೆ ನೆರವು ನೀಡಿ ಯುವಕರಲ್ಲಿ ದೇಶ ವಿರೋಧಿ ಭಾವನೆ ಬಿತ್ತುತ್ತಿರುವ ಆರೋಪದ ಮೇರೆಗೆ ಕೇಂದ್ರ ಸರ್ಕಾರ ಜಮಾತ್-ಇ-ಇಸ್ಲಾಮಿ (ಜೆಇಐ) ಸಂಘಟನೆಯನ್ನು ನಿಷೇಧ ಮಾಡಿದೆ. ಕಾನೂನು ಬಾಹಿರ ಚಟುವಟಿಕೆ ಕಾಯ್ದೆ 1967ರ ಸೆಕ್ಷನ್ 3ರ ಅಡಿಯಲ್ಲಿ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿತ್ತು.
ಮುಂದಿನ ಐದು ವರ್ಷಗಳ ಕಾಲ ಈ ಸಂಘಟನೆಯನ್ನು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶಾದ್ಯಂತ ನಿಷೇಧಿಸಲಾಗಿದ್ದು, ಸಂಘಟನೆಯು ಯಾವುದೇ ರೀತಿಯ ಬಹಿರಂಗ ಸಭೆ ಕಾರ್ಯಕ್ರಮ ನಡೆಸಿದರೂ ಅದು ಕಾನೂನು ಬಾಹಿರ ಎಂದು ಸೂಚಿಸಿದೆ. 1953ರಲ್ಲಿ ಬಂದ ಜೆಇಐ ಸಂಘಟನೆ ಕಾಶ್ಮೀರದಲ್ಲಿ ಪ್ರಮುಖ ಪ್ರತ್ಯೇಕತಾವಾದಿ ಸಂಘಟನೆಯಾಗಿತ್ತು. 1987ರವರೆಗೂ ಈ ಸಂಘಟನೆ ಕಾಶ್ಮೀರದ ಎಲ್ಲ ರೀತಿಯ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುತ್ತಿತ್ತು. ಅಲ್ಲದೆ ಕಾಶ್ಮೀರದ ಹುರಿಯತ್ ಮುಖಂಡ ಸೈಯ್ಯದ್ ಅಲಿ ಶಾ ಗಿಲಾನಿ ಕೂಡ ಈ ಹಿಂದೆ ಇದೇ ಸಂಘಟನೆ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 1989ರಲ್ಲಿ ಮೊದಲ ಬಾರಿಗೆ ಉಗ್ರ ಸಂಘಟನೆಗಳೊಂದಿಗೆ ಕೈ ಜೋಡಿಸಿದ್ದ ಈ ಜೆಇಐ ಸಂಘಟನೆ ಚುನಾವಣೆಗಳಿಂದ ದೂರ ಉಳಿದಿತ್ತು. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತ್ಯೇಕತಾವಾದಿಗಳ ಪರ ಕಣಿವೆ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv